ಪುಟ:ಕ್ರಾಂತಿ ಕಲ್ಯಾಣ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೨೯

"ಅದೇನೇ ಇರಲಿ, ನಾನು ಇಲ್ಲಿರುವವರೆಗೆ ಅವನ ವಿಚಾರದಲ್ಲಿ ಎಚ್ಚರದಿಂದ ನಡೆದುಕೊಳ್ಳಬೇಕು.” ಎಂದು ಅಗ್ಗಳನು ತನ್ನಲ್ಲಿ ತಾನು ನಿರ್ಧರಿಸಿಕೊಂಡನು.

ಆಗ ಹೆಗ್ಗಡೆ ಅಲ್ಲಿಗೆ ಬಂದು ಕ್ರಮಿತ ಅಗ್ಗಳರನ್ನು ಓಲಗ ಶಾಲೆಗೆ ಕರೆದುಕೊಂಡು ಹೋದನು. ತಟ್ಟನೆ ಸಭೆಯಲ್ಲಿ ತನ್ನ ಕರ್ತವ್ಯದ ನೆನಪಾಗಿ ಕರ್ಣದೇವನು ಅವರ ಹಿಂದೆ ಹೋದನು.

ರಾಜಗೃಹದ ಓಲಗ ಶಾಲೆ ಚಾಲುಕ್ಯ ಮಾದರಿಯ ಒಂದು ಸುಂದರ ಕಟ್ಟಡ. ಗೋಡೆ ಕಂಭಗಳಲ್ಲಿ ಮಾನವಾಕಾರದ ಸುಂದರ ಪ್ರತಿಮೆಗಳು, ಕೊರೆದು ಮಾಡಿದ ವಾತಾಯನ ಜಾಲಂದ್ರಗಳು, ಸೂರಿನಲ್ಲಿ ಮದನಿಕಾ ವಿಗ್ರಹಗಳು, ಕುಸುರಿ ಕೆಲಸದ ಭುವನೇಶ್ವರಿ, ಇವುಗಳಿಂದ ಭವ್ಯವಾದ ಅಂತಹ ಸುಂದರ ಸಭಾಭವನ ಕಲ್ಯಾಣದ ಇನ್ನಾವ ಅರಮನೆಯಲ್ಲಿಯೂ ಇರಲಿಲ್ಲ. ನಡುವೆ ದುಂಡಾಗಿ ಕಟ್ಟಿದ ವೇದಿಕೆಯ ಮೇಲೆ ಚಾಲುಕ್ಯ ಸಿಂಹಾಸನ.

ಬಾಗಿಲುಗಳಲ್ಲಿ ಬಿಚ್ಚು ಕತ್ತಿಯ ಪಹರೆ ಇತ್ತು. ಒಳಗೆ ಬೆಳ್ಳಿಯ ಕೋಲುಗಳನ್ನು ಹಿಡಿದ ಪಸಾಯಿತರು. ವಿಚಿತ್ರ ಉಡಿಗೆಗಳನ್ನು ಧರಿಸಿದ ಭಟ್ಟಂಗಿಗಳು, ಕವಿ ಗಾಯಕ ಸ್ತುತಿಪಾಠಕರು. ಪುರೋಹಿತ ನೈಮಿತ್ತಿಕ ಶಾಸ್ತಿ ಪಂಡಿತ ಪೌರಾಣಿಕರು, ತಮ್ಮ ತಮ್ಮ ಸ್ಥಾನಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಸಭೆಯಲ್ಲಿ ರಾಜಾಗಮನವನ್ನು ಸೂಚಿಸುವ ಗಂಭೀರ ಮೌನ, ವಂದಿಮಾಗಧರು ಉಗ್ಗಡಿಸಿದರು:

ಸ್ವಸ್ತಿ ಸಮಸ್ತ ಭುವನಾಶ್ರಯ, ಪೃಥ್ವೀವಲ್ಲಭ ಮಹಾರಾಜಾಧಿರಾಜ, ಪರಮೇಶ್ವರ, ಪರಮ ಭಟ್ಟಾರಕ, ಸತ್ಯಾಶ್ರಯ ಕುಲತಿಲಕ, ಚಾಲುಕ್ಯಾಭರಣ, ಮಲ್ಲಿಕಾಮೋದ, ಮಾರ್ಪಡಿ ಭೀಮ, ರಾಯಗಜಕೇಸರಿ, ಗಂಡರೊಳು ಗಂಡ, ಗಂಡಬಂಗಾರ, ಚೋಳಾಗ್ರ ಕಾಲಾನಲ, ಚೋಳಬಂಡನಾಪೇಕ್ಷ ವಿದಗ್ಧರಾಯ, ಪ್ರತಾಪಾದಿತ್ಯ ತೇಜೋಮಾರ್ತಂಡ, ಶೌರ್ಯನಾರಾಯಣ, ಪೌಷ್ಠಾನ ಸಹಸ್ರಬಾಹು, ರಾಯ ಜಗಝಂಪ ಕೀರ್ತಿ, ಚಾಲುಕ್ಯವಂಶೋದ್ಭವ ಶ್ರೀಮತ್ ಜಗದೇಕಮಲ್ಲ ಮಹಾರಾಜ ಬಹು ಪರಾಕ್!

ಪ್ರತಿಹಾರಿ ಮುಂದೆ ನಡೆದು ದಾರಿ ತೋರುತ್ತಿರಲು ಜಗದೇಕಮಲ್ಲನು ಓಲಗಶಾಲೆಗೆ ಬಂದನು. ಪ್ರಧಾನ ನರ್ತಕಿ ಗಾಯಕಿ ಸಖಿ ಸವತಿ ಸೂಳೆ ಮೊದಲಾದ ಗಣಿಕಾವಾಸದ ಹೆಗ್ಗಡತಿಯರು ಹಿಂದಿದ್ದರು. ಅವರ ವಿಚಿತ್ರ ಭೂಷಣ ವಿಲಾಸಗಳೂ ಎಲ್ಲರ ಕಣ್ಮನಗಳನ್ನು ಸೆಳೆದವು.

ಈ ಪರಿವಾರದ ನಡುವೆ ಜಗದೇಕಮಲ್ಲನು ಸೊಕ್ಕೇರಿದ ಮದ್ದಾನೆಯಂತೆ ಜಗ್ಗುಹಾಕಿ ನಡೆಯುತ್ತಿದ್ದನು. ಮಧುಪಾನದಿಂದ ಕಣ್ಣುಗಳು ಕೆಂಪೇರಿದ್ದವು. ತೊಟ್ಟಿದ್ದ