ಪುಟ:ಕ್ರಾಂತಿ ಕಲ್ಯಾಣ.pdf/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೫೯ ನಿಂತವು. ಮೊದಲು ರಾಹುತರು ಕಣಿವೆಯನ್ನು ಪ್ರವೇಶಿಸಿ, ಮಾರ್ಗ ನಿರಾಪದವಾಗಿದೆಯೆಂದು ತಿಳಿದ ಮೇಲೆ ರಥಗಳು ಹೋಗಬೇಕೆಂದು ಗೊತ್ತಾಯಿತು. ಸಂಜೆಯಾಗುತ್ತಿದ್ದಂತೆ ಅಶ್ವಾರೋಹಿಗಳು ಕಣಿವೆಯನ್ನು ಪ್ರವೇಶಿಸಿದರು. ಎರಡು ಕಡೆಯ ಗುಡ್ಡಗಳ ಮೇಲೆ ಅವಿತಿದ್ದ ಗಣಾಚಾರಿ ಯೋಧರು ಅವರನ್ನು ತಡೆಯಲಿಲ್ಲ. ಅಶ್ವಾರೋಹಿ ದಳಗಳು ಕಣಿವೆಯನ್ನು ದಾಟಿ ಶಿಬಿರವಿದ್ದ ಬಯಲಿಗೆ ಬಂದ ಮೇಲೆ ಕಣಿವೆಯನ್ನು ಬಂಧಿಸಿ ಏಕಕಾಲದಲ್ಲಿ ಎರಡು ಕಡೆಗಳಿಂದ ಆಕ್ರಮಣ ನಡೆಸುವುದು ಅವರ ಉದ್ದೇಶವಾಗಿತ್ತು. ಈ ಶಿಬಿರವಿದ್ದ ಬಯಲಿಗೆ ಬಂದ ಕೂಡಲೆ ರಾಹುತರ ಪಡೆಗಳು ಚಕ್ರಾಕಾರವಾಗಿ ಚದುರಿ ನಾಗಾಲೋಟದಿಂದ ಮುನ್ನುಗ್ಗಿದವು, ಶರಣರು ಬೆದರಿ ಗೂಡಾರಗಳಿಂದ ಹೊರಗೆ ಬಂದಾಗ ಭಲ್ಲೆಯಗಳಿಂದ ಇರಿದು ಅವರನ್ನು ನಾಶಮಾಡುವುದು ರಾಹುತರ ಉದ್ದೇಶವಾಗಿತ್ತು. ಶಿಬಿರ ಜನ ಶೂನ್ಯವೆಂಬುದು ರಾಹುತರಿಗೆ ತಿಳಿದಿರಲಿಲ್ಲ. ಗಣಾಚಾರಿಯೋಧರು ಗೂಡಾರಗಳಿಗೆ ಅಲ್ಲಲ್ಲಿ ಎಣ್ಣೆ ಹೊಯ್ದು ದೀಪಗಳನ್ನು ಹಚ್ಚಿಟ್ಟು ಹೋಗಿದ್ದರು. ರಾಹುತರಿಗೆ ಅಡಚಣೆಯಾಗಲೆಂದು ಚಕ್ಕಡಿಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರು. ರಾಹುತರ ಆಕ್ರಮಣದ ಮೊದಲರಭಸದಲ್ಲಿಯೇ ದೀಪಗಳು ಉರುಳಿ, ಗೂಡಾರಗಳು ಹತ್ತಿ ಉರಿಯಲು ಮೊದಲಾಯಿತು. ಕ್ಷಣಾರ್ಧದಲ್ಲಿ ಚಕ್ಕಡಿಗಳೂ ಉರಿಯತೊಡಗಿದವು. ಶರಣರು ನದೀತೀರಕ್ಕೆ ಓಡಿಹೋಗಿರಬೇಕೆಂದು ಭಾವಿಸಿ ರಾಹುತರು ಆ ಕಡೆ ಕುದುರೆಗಳನ್ನು ಓಡಿಸಿದರು. ಗಣಾಚಾರಿ ಯೋಧರು ರಚಿಸಿದ್ದ ಸಿಡಿದಾರಗಳೂ ತೋರಿಕೆಯ ಅಡ್ಡಕಟ್ಟೆಗಳೂ ಅಲ್ಲಿ ರಾಹುತರಿಗೆ ಅಡ್ಡಿಯಾದವು. ಅನೇಕ ಕುದುರೆಗಳು ಸಿಡಿದಾರಗಳಿಗೆ ಸಿಕ್ಕು ಮುಗ್ಗರಿಸಿ ಬಿದ್ದವು. ಇನ್ನು ಕೆಲವು ಕುದುರೆಗಳು ಅಡ್ಡಕಟ್ಟೆಗಳನ್ನು ದಾಟಿ ರಾಹುತರೊಡನೆ ನದಿಗೆ ಬಿದ್ದು ಪ್ರವಾಹದಲ್ಲಿ ತೇಲಿಹೋದವು. ಈ ಅನುಕೂಲವಸರಕ್ಕಾಗಿ ಕಾಯುತ್ತಿದ್ದ ಗಣಾಚಾರಿ ಯೋಧರು ಗುಡ್ಡಗಳಿಂದಿಳಿದು ಕತ್ತಿ, ಗದೆ, ದೊಣ್ಣೆ ಮುಂತಾದ ಆಯುಧಗಳನ್ನು ತಿರುಗಿಸುತ್ತ ರಾಹುತರ ಮೇಲೆ ಬಿದ್ದರು. ಅರ್ಧ ಗಳಿಗೆ ಹೋರಾಟ ನಡೆದು ಆಕ್ರಮಣ ನಡೆಸಿದ ಐನೂರು ಮಂದಿ ರಾಹುತರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹತರಾದರು. ಬೆಂಕಿಗೆ ಬೆದರಿದ ಕುದುರೆಗಳೂ ರಾಹುತರನ್ನು ಕೆಳಗೆ ತಳ್ಳಿ ದಿಕ್ಕಾಪಾಲಾಗಿ ಓಡಿದವು. ಬೆದರಿದ ಕುದುರೆಗಳ ಕಾಲುಗಳಿಗೆ ಸಿಕ್ಕು ರಾಹುತರನೇಕರು ಸತ್ತರು. ಅಳಿದುಳಿದವರು ಭೀತಿಯಿಂದ ಕಣಿವೆಯ ಕಡೆ ಓಡಿದರು.