ಪುಟ:ಕ್ರಾಂತಿ ಕಲ್ಯಾಣ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೪೧

"ಬಿಜ್ಜಳ ಮಹಾರಾಜರ ಧರ್ಮಾಧಿಕಾರಿ ಪಂಡಿತ ನಾರಣಕ್ರಮಿತರ ಸನ್ನಿಧಾನಕ್ಕೆ ಅಗ್ಗಳನ ಬಿನ್ನಹ.

ನೀವು ನನ್ನನ್ನು ರಾಜಗೃಹದಲ್ಲಿ ಬಿಟ್ಟು ಹೋಗಿ ಇಂದಿಗೆ ಹತ್ತು ದಿನಗಳಾದವು. ಯಾವ ವಿಚಾರಕ್ಕಾಗಿ ನನ್ನನ್ನು ನೀವು ಕಳುಹಿಸಿದಿರೋ ಸಂಬಂಧ ಪಟ್ಟವರಲ್ಲಿ ಅದನ್ನು ಪ್ರಸ್ತಾಪ ಮಾಡುವ ಅವಕಾಶವೂ ಇದುವರೆಗೆ ನನಗೆ ದೊರಕಿಲ್ಲ. ಅದಕ್ಕಾಗಿ ಕಾಯುತ್ತ ಈ ಚಿನ್ನದ ಪಂಜರದಲ್ಲಿ ನಾನು ಇನ್ನೆಷ್ಟು ದಿನಗಳು ಕಳೆಯಬೇಕು? ನೀವು ದಯಮಾಡಿ ಇಲ್ಲಿಗೆ ಬಂದರೆ ಈ ಸಮಸ್ಯೆಗಳು ಪರಿಹಾರವಾಗುವುವು.

ಇತಿ, ಅಗ್ಗಳ"

ಪತ್ರವನ್ನು ಮುಗಿಸಿ ದಾಸಿಯ ಮುಖಾಂತರ ಹೆಗ್ಗಡೆಗೆ ಹೇಳಿ ಕಳುಹಿಸಿದನು. "ಏನು ಸಮಾಚಾರ ಪಂಡಿತರೆ?" ಎನ್ನುತ್ತಾ ಕೊಂಚ ಹೊತ್ತಿನ ಮೇಲೆ ಹೆಗ್ಗಡೆ ಅಲ್ಲಿಗೆ ಬಂದನು.

ಅಗ್ಗಳನ ವಿಚಾರದಲ್ಲಿ ಹೆಗ್ಗಡೆಯ ವರ್ತನೆ ಈಗ ಬಹುಮಟ್ಟಿಗೆ ಸುಧಾರಿತವಾಗಿತ್ತು. ಪಾನಗೋಷ್ಟಿಯ ಮೊದಲ ದಿನದ ಸಲಿಗೆಯ ಸ್ಥಾನದಲ್ಲಿ ವಿನಯ ತಲೆದೋರಿತ್ತು. ಹೆಸರು ಹಿಡಿದು ಕರೆಯುವುದನ್ನು ನಿಲ್ಲಿಸಿ ಗೌರವದಿಂದ, "ಪಂಡಿತರೆ" ಎಂದು ಸಂಬೋಧಿಸುತ್ತಿದ್ದನು.

"ಧರ್ಮಾಧಿಕರಣದ ಹಿರಿಯ ಅಧಿಕಾರಿ ನಾರಣಕ್ರಮಿತರಿಗೆ ಈ ಓಲೆ ಕಳುಹಿಸಬೇಕಾಗಿದೆ. ದಯಮಾಡಿ ಅದಕ್ಕೆ ಏರ್ಪಡಿಸಿರಿ," ಅಗ್ಗಳನು ಹೆಗ್ಗಡೆಗೆ ಹೇಳಿದನು.

ಹೆಗ್ಗಡೆ ಕೊಂಚ ಹೊತ್ತು ಯೋಚಿಸಿ, "ರಾಜಗೃಹದಲ್ಲಿ ಇರುವವರೇ ಆಗಲಿ ಕರ್ಣದೇವರಸರ ಅನುಮತಿಯಿಲ್ಲದೆ ಹೊರಗಿನವರಿಗೆ ಓಲೆ ಕಳುಹಿಸುವಂತಿಲ್ಲ. ನಾನು ನಿಮ್ಮ ಓಲೆಯನ್ನು ಕರ್ಣದೇವರಸರಿಗೆ ಕೊಡುತ್ತೇನೆ. ಕಳುಹಿಸುವುದೂ ಬಿಡುವುದೂ ಅವರ ಇಚ್ಚೆ" ಎಂದನು.

"ನಾನು ನಿಮ್ಮಬಂದಿಯಲ್ಲ, ಹೆಗ್ಗಡೆಗಳೇ. ನಾರಣಕ್ರಮಿತರ ಅಪೇಕ್ಷೆಯಂತೆ ಒಂದು ವಿಶೇಷ ಕಾರ್ಯಕ್ಕಾಗಿ ಅತಿಥಿಯಾಗಿ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಕಾರಾಗೃಹದ ನಿಬಂಧನೆಗಳು ನನಗೆ ಅನ್ವಯಿಸುವುದಿಲ್ಲ"–ತುಸು ದರ್ಪದಿಂದಲೆ ಅಗ್ಗಳನು ನುಡಿದನು. ದರ್ಪ ದುರಭಿಮಾನ ಧೂರ್ತತೆಗಳೇ ರಾಜಗೃಹದಲ್ಲಿ ಸಲ್ಲುವ ನಾಣ್ಯಗಳೆಂದು ಅಗ್ಗಳನಿಗೆ ಅನುಭವವಾಗಿತ್ತು.

"ಇಷ್ಟಕ್ಕೇ ನೀವು ಕೋಪ ಮಾಡಿದರೆ ಹೇಗೆ ಪಂಡಿತರೆ? ನೀವು ನನ್ನ