ಪುಟ:ಕ್ರಾಂತಿ ಕಲ್ಯಾಣ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ಕ್ರಾಂತಿ ಕಲ್ಯಾಣ

ಸಭೆಯಲ್ಲಿ ಕಲಹ ಕೋಲಾಹಲಗಳಿಗೆ ಎಡೆಯಿಲ್ಲದಂತೆ ಹೆಗ್ಗಡೆ ಎಚ್ಚರ ವಹಿಸಿದನು. ಮಧುವಿಗೆ ಇನ್ನಷ್ಟು ನೀರು ಬೆರಸಬೇಕೆಂದು ದಾಸಿಯರಿಗೆ ಆಜ್ಞೆಮಾಡಿದನು. ಪಾನಗೋಷ್ಟಿಗೆ ಆಹ್ವಾನಿತರಾಗುವ ಹೆಗ್ಗಡತಿಯರು ಎರಡು ಬಟ್ಟಲುಗಳಿಗಿಂತ ಹೆಚ್ಚು ಪಾನ ಮಾಡಕೂಡದೆಂದು ವಿಧಿಸಿದನು.

ಕರ್ಣದೇವನಿಗೆ ಈ ಮಾರ್ಪಾಡುಗಳು ತಿಳಿದಾಗ, "ಕಾವ್ಯೋಪದೇಶಿಯಂತೆ ಬಂದ ಅಗ್ಗಳನು ನಿನ್ನ ಭಾಗಕ್ಕೆ ಧರ್ಮೋಪದೇಶೀಯಾದಂತಿದೆ!” ಎಂದು ಹಾಸ್ಯ ಮಾಡಿದಾಗ ಹೆಗ್ಗಡೆ, "ನಿನ್ನೆ ಕಲಚೂರ್ಯ ಅರಮನೆಯ ಕರಣಿಕನೊಬ್ಬನು ಬಂದಿದ್ದ. ನನ್ನ ಪತ್ನಿಯ ಸೋದರ ಸಂಬಂಧ. 'ಬಿಜ್ಜಳರಾಯರು ಪ್ರತಿನಿತ್ಯ ರಾಜ ಗೃಹದ ವರದಿ ತರಿಸಿಕೊಳ್ಳುತ್ತಿದ್ದಾರೆ. ಎಚ್ಚರವಾಗಿರಿ' ಎಂದು ಹೇಳಿದ. ನಂಬದಿರುವುದು ಹೇಗೆ?” ಎಂದು ಉತ್ತರ ಕೊಟ್ಟಿದ್ದನು.

ಈ ಎಲ್ಲ ಪರಿವರ್ತನೆಗಳಿಂದ ಅಗ್ಗಳನಿಗೆ ಸಮಾಧಾನವಾಗಲಿಲ್ಲ. ಅವನಿಗೆ ಬೇಕಾಗಿದ್ದದ್ದು ಜಗದೇಕಮಲ್ಲನೊಡನೆ ರಹಸ್ಯವಾಗಿ ಮಾತಾಡುವ ಅವಕಾಶ. ಹತ್ತು ದಿನಗಳು ಕಳೆದರೂ ಅದು ಸಾಧ್ಯವಾಗಲಿಲ್ಲ. ಅವರು ಒಬ್ಬರನ್ನೊಬ್ಬರು ನೋಡುತ್ತಿದ್ದುದು ಪಾನಗೋಷ್ಟಿಯಲ್ಲಿ. ಕರ್ಣದೇವನೋ ಹೆಗ್ಗಡೆಯೋ ಆಗ ತಪ್ಪದೆ ಸಂಗಡಿರುತ್ತಿದ್ದರು. ಉಳಿದ ವೇಳೆಗಳಲ್ಲಿ ಜಗದೇಕಮಲ್ಲನ ವಾಸಗೃಹದ ಸುತ್ತ ಬಿಚ್ಚುಕತ್ತಿಯ ಕಾವಲಿರುತ್ತಿತ್ತು. ಕರ್ಣದೇವನ ವಿಶೇಷ ಅನುಮತಿಯಿಲ್ಲದೆ ಆ ಕಡೆ ಸುಳಿಯುವಂತೆಯೂ ಇರಲಿಲ್ಲ.

ತನ್ನ ಸೇವೆಗಾಗಿ ಗೊತ್ತಾಗಿದ್ದ ದಾಸಿ ಪ್ರತಿದಿನ ಅನೇಕ ಸಾರಿ ಗಣಿಕಾವಾಸಕ್ಕೆ ಹೋಗಿಬರುತ್ತಿದ್ದಳು. ಅವಳ ಮುಖಾಂತರ ರಹಸ್ಯವಾಗಿ ಜಗದೇಕಮಲ್ಲನೊಡನೆ ಸಂಪರ್ಕ ಬೆಳೆಸುವುದು ಸಾಧ್ಯವೇ? ಎಂದು ಅಗ್ಗಳನು ಯೋಚಿಸಿದನು. ಆದರೆ ದಾಸಿಯ ಬುದ್ಧಿಶಕ್ತಿ ಚಮತ್ಕಾರಗಳು ಪ್ರಕಾಶಕ್ಕೆ ಬರುತ್ತಿದ್ದದ್ದು ಶಯನಾಗಾರದ ನಾಲ್ಕು ಗೋಡೆಗಳ ನಡುವೆ ಮಾತ್ರವೆಂದೂ, ಉಳಿದ ವಿಚಾರಗಳಲ್ಲಿ ಅವಳು ತಿಳಿಗೇಡಿಯಂತೆ ವರ್ತಿಸುವಳೆಂದೂ ತಿಳಿದು ಸುಮ್ಮನಾದನು.

ಬೊಮ್ಮರಸ ಮತ್ತು ಬ್ರಹ್ಮಶಿವ ಪಂಡಿತರೇನಾದರೆಂಬುದು ಅಗ್ಗಳನ ಚಿಂತೆಗೆ ಮತ್ತೊಂದು ಕಾರಣವಾಗಿತ್ತು. ಕ್ರಮಿತನ ಭಟರು ಅವರನ್ನು ಬಂಧಿಸಿರಬಹುದೆ? ಆಗ ಕಾಮೇಶ್ವರಿಯ ಒಳಸಂಚಿನ ವಿಚಾರ ಬಯಲಾಗುವುದು. ಅದಕ್ಕೆ ಬಿಜ್ಜಳನ ಪ್ರತಿಕ್ರಿಯೆಯೇನು? ಕ್ರಮಿತನನ್ನು ನೋಡುವುದರಿಂದ ಮಾತ್ರವೇ ಈ ಎಲ್ಲ ಸಮಸ್ಯೆಗಳ ಪರಿಹಾರವಾಗುವುದೆಂದು ಭಾವಿಸಿ ಪೆಟ್ಟಿಗೆಯಿಂದ ಲೇಖನೋಪಕರಣಗಳನ್ನು ತೆಗೆದುಕೊಂಡು ಬರೆದನು.