ಪುಟ:ಕ್ರಾಂತಿ ಕಲ್ಯಾಣ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೪೩

"ಬೇಟೆಯ ಕಾಲದಲ್ಲಿ ಅವರ ರಕ್ಷಣೆಯ ಹೊಣೆ ಸಂಪೂರ್ಣವಾಗಿ ನನ್ನ ಮೇಲೆ ಬೀಳುವುದು."

"ಬಿದ್ದರೇನಾಯಿತು? ಅದರಿಂದ ನಿಮ್ಮ ಬೆನ್ನು ಮುರಿಯುವುದಿಲ್ಲ,” ಎಂದು ನಗೆಯಾಡಿದ ಅಗ್ಗಳ.

"ಜಗದೇಕಮಲ್ಲರಸರು ಕುದುರೆ ಸವಾರಿಯಲ್ಲಿ ನಿಪುಣರು. ಅವರಿಗೆ ಸಮನಾಗಿ ಕುದುರೆ ಓಡಿಸುವುದು ನನ್ನಿಂದಾಗುವುದಿಲ್ಲ."

"ನಾನು ಅವರಿಗಿಂತ ಚೆನ್ನಾಗಿ ಓಡಿಸಬಲ್ಲೆ. ಅಪೇಕ್ಷಿಸಿದರೆ ನಿಮ್ಮ ಸಂಗಡ ಬರುತ್ತೇನೆ."

ಉಳಿದೆನೆಂಬ ಸಂತೋಷದಿಂದ ಹೆಗ್ಗಡೆ, "ಹಾಗಾದರೆ ನಿಮಗೆ ಬೇಕಾದ ಕುದುರೆಯನ್ನು ಇಂದೇ ಆರಿಸಿಕೊಳ್ಳಿ" ಎಂದನು.

ಆ ಮಧ್ಯಾಹ್ನ ಅಗ್ಗಳನು ಅಶ್ವಶಾಲೆಯ ಜಾತಿಕುದುರೆಗಳಲ್ಲಿ ಕಪ್ಪು ಬಣ್ಣದ ಕುದುರೆಯೊಂದನ್ನು ತನಗಾಗಿ ಆರಿಸಿಕೊಂಡನು. ಮರುದಿನ ಬೆಳಕು ಹರಿಯುತ್ತಲೇ ೫೦ ಮಂದಿ ರಾವುತರ ರಕ್ಷಣೆಯಲ್ಲಿ ಜಗದೇಕಮಲ್ಲನು ಬೇಟೆಗೆ ಹೊರಟನು. ನಗರದಿಂದ ಗಾವುದ ದೂರದಲ್ಲಿ ಒಂದು ಸಣ್ಣ ಅಡವಿ ಬೇಟೆಗೆ ಗೊತ್ತಾಗಿದ್ದಿತು. ಸುಮಾರು ಹರಿದಾರಿ ಸುತ್ತಳತೆಯ ನಿಬಿಡ ವನ, ಅದರ ಸುತ್ತ ಹರಿದಾರಿಯವರೆಗೆ ಹರಡಿದ್ದ ಮರಗಿಡಗಳಿಲ್ಲದ ಬಯಲು. ಬೇಟೆಗಿಂತ ಕುದುರೆ ಸವಾರಿಗೆ ಅನುಕೂಲವಾಗಿತ್ತು ಆ ಪ್ರದೇಶ.

ವನದ ಹತ್ತಿರ ಬರುತ್ತಲೇ ಜಗದೇಕಮಲ್ಲನು ಕಡಿವಾಣವನ್ನು ಸಡಲಿಸಿ ಕುದುರೆ ಇಚ್ಚೆ ಬಂದಂತೆ ಓಡಲು ಬಿಟ್ಟನು. ಮರದಡಿಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದ ಹೆಗ್ಗಡೆ ಇದನ್ನು ಕಂಡಕೂಡಲೇ ನಾಲ್ಕುಮಂದಿ ಸವಾರರನ್ನು ಹಿಂದೆ ಕಳುಹಿಸಿದನು. ಅಗ್ಗಳನೂ ಅವರ ಸಂಗಡ ಹೋದನು.

ಜಗದೇಕಮಲ್ಲನು ವನದ ಅಂಚಿನಲ್ಲಿ ಕುದುರೆಯನ್ನು ಓಡಿಸುತ್ತ ಹೆಗ್ಗಡೆ ಕಣ್ಮರೆಯಾಗುತ್ತಲೆ ಬಯಲ ಕಡೆ ತಿರುಗಿಸಿದನು. ನೆಲ ಅನುಕೂಲವಾಗಿದ್ದುದರಿಂದ ಕುದುರೆ ನಾಗಾಲೋಟದಿಂದ ವೇಗವಾಗಿ ಓಡಿತು. ಸವಾರರ ಕುದುರೆಗಳು ಹಿಂದುಳಿದವು. ಅಗ್ಗಳನ ಕುದುರೆ ಮಾತ್ರವೇ ಸಂಗಡ ಹೋಯಿತು. ಈ ರೀತಿ ಅವರು ಹೆಚ್ಚು ದೂರ ಹೋದಮೇಲೆ ಜಗದೇಕಮಲ್ಲನ ಕುದುರೆ, ಸವಾರನ ಅಜಾಗರೂಕತೆಯಿಂದಲೋ, ಆಕಸ್ಮಿಕವಾಗಿಯೋ ಬೆದರಿ ಕುಪ್ಪಳಿಸಿ, ಸವಾರನನ್ನು ಕೆಡವಿ ಓಡಿಹೋಯಿತು.

ಅಗ್ಗಳನು ಕುದುರೆಯಿಂದಿಳಿದು ಹತ್ತಿರ ಹೋಗಿ ನೋಡಿದಾಗ