ಪುಟ:ಕ್ರಾಂತಿ ಕಲ್ಯಾಣ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦

ಕ್ರಾಂತಿ ಕಲ್ಯಾಣ

ಕ್ರಮಿತನು ಹೇಳಿದನು: "ಎಲ್ಲ ಅರಸರಂತೆ ಜಗದೇಕಮಲ್ಲರಸರೂ ವಿಷಯಾಸಕ್ತರೆಂದು ನಿಮಗೆ ತಿಳಿಯದೆ, ಅಗ್ಗಳ. ರಾಜಗೃಹದ ಗಣಿಕಾ ಪರಿವಾರ ಚಾಲುಕ್ಯ ರಾಜ್ಯಕ್ಕೆ ಹೆಸರಾದದ್ದು. ಜಗದೇಕಮಲ್ಲರಸರ ಸಮಾರಾಧನೆಗಾಗಿಯೇ ಅದು ರಚಿಸಲ್ಪಟ್ಟಿತು. ಇಂತಹ ವಿಷಯಾಸಕ್ತರಲ್ಲಿ ನೀವು ಯೋಗಿಯ ಗುಣಗಳನ್ನು ಕಾಣುತ್ತಿರುವಿರಿ!"

ಅಗ್ಗಳನು ನಗೆಸೂಸಿ ಗಂಭೀರವಾಗಿ ನುಡಿದನು: "ಜಗದೇಕಮಲ್ಲರ ವಿಚಾರ ನಾನು ಕೇಳಿದ್ದೇನೆ. ಅವರು ನೂರ್ಮಡಿ ತೈಲಪನಂತೆ ವಿಷಯಲೋಲುಪ್ತರಾಗಿರಲಿಲ್ಲ. ತಮ್ಮ ಯೌವನದಲ್ಲಿ ಭಾರತದ ಅನೇಕ ರಾಜ್ಯಗಳಲ್ಲಿ ಸಂಚಾರ ಮಾಡಿ ವ್ಯವಹಾರ ರಾಜಕೀಯಗಳ ಅನುಭವ ಪಡೆದರು. ಈ ರಾಜಕೀಯ ಆಸಕ್ತಿಯಿಂದ ಅವರಲ್ಲಿ ಮಹತ್ವಾಕಾಂಕ್ಷೆ ಅಂಕುರಿಸಿತು. ರಾಜ್ಯದ ಹಿತರಕ್ಷಣೆಗಾಗಿ ಬಿಜ್ಜಳರಾಯರು ಅವರನ್ನು ಈ ಅರಮನೆಯಲ್ಲಿ ಗೃಹಬಂಧನದಲ್ಲಿಟ್ಟರು. ಅವರ ಬಂಧನ ಸುಖಮಯವಾಗಲು ನೀವು ರಚಿಸಿದ ಗಣಿಕಾವಾಸದ ನಿತ್ಯ ಕಲಹ, ನಿತ್ಯ ವಿಹಾರ, ನಿತ್ಯ ವ್ಯಭಿಚಾರಗಳ ನಡುವೆ ಆರು ವರ್ಷಗಳ ದೀರ್ಘಕಾಲವನ್ನು ಕಳೆದ ಮೇಲೂ ಜಗದೇಕಮಲ್ಲರು ತಮ್ಮ ಬುದ್ಧಿ ವಿವೇಕಗಳನ್ನು ಉಳಿಸಿಕೊಂಡಿದ್ದರೆ ಅದು ಯೋಗಿಗೆ ಮಾತ್ರವೇ ಸಾಧ್ಯ. ಇಂದು ಬೇಟೆಯಲ್ಲಿ ನಡೆದ ಘಟನೆಯಿಂದ ಅವರ ಬಗೆಗೆ ನನ್ನ ಗೌರವ ಹೆಚ್ಚಿದೆ."

ಅಗ್ಗಳನು ನಿಜ ಹೇಳುತ್ತಿರುವನೇ? ಅಥವಾ ತನ್ನನ್ನು ವಂಚಿಸಲು ರಚಿಸಿದ ರೂಢಿಯ ಮಾತುಗಳೇ ಇವು? ಕ್ರಮಿತನ ಹೃದಯದಲ್ಲಿ ಸಂದೇಹ ಮೂಡಿತು. ಪ್ರಕಟವಾಗಿ, ನಿಮ್ಮ ಸಂಧಾನ ಎಲ್ಲಿಗೆ ಬಂದಿದೆ? ಅದನ್ನು ಹೇಳಿ," ಎಂದನು.

"ಜಗದೇಕಮಲ್ಲರಸರನ್ನು ಏಕಾಂತದಲ್ಲಿ ನೋಡಿ ಮಾತಾಡುವ ಅವಕಾಶ ದೊರಕಿದರಲ್ಲವೇ ಸಂಧಾನ? ಕರ್ಣದೇವರಸರು, ಮನೆಹೆಗ್ಗಡೆ, ಅವರ ಸುತ್ತ ಬಿಚ್ಚುಗತ್ತಿಯ ಕೋಟೆ ಕಟ್ಟಿದ್ದಾರೆ. ಹತ್ತು ದಿನಗಳಾದರೂ ಅದನ್ನು ಭೇದಿಸಲು ನಾನು ಶಕ್ತನಾಗಲಿಲ್ಲ. ಅದಕ್ಕಾಗಿಯೇ ನಿಮಗೆ ಓಲೆ ಬರೆದದ್ದು," -ಅಗ್ಗಳನು ನಿರಾಶೆಗೊಂಡವನಂತೆ ನುಡಿದನು.

"ಕ್ಷಮಿಸಿರಿ, ಅಗ್ಗಳ, ರಾಜಗೃಹದ ನಿಬಂಧನೆಗಳೂ ಇಷ್ಟೊಂದು ನಿಷ್ಠುರವೆಂದು ನನಗೆ ತಿಳಿದಿರಲಿಲ್ಲ. ಹೆಗ್ಗಡೆಗೆ ಹೇಳಿ ಸರಿಪಡಿಸುತ್ತೇನೆ," -ಎಂದು ಕ್ರಮಿತನು ಹೇಳುತ್ತಿದ್ದಂತೆ ಮನೆಹೆಗ್ಗಡೆ ಓಡುತ್ತ ಅಲ್ಲಿಗೆ ಬಂದನು. ಅಸ್ತವ್ಯಸ್ತವಾಗಿದ್ದ ಅವನ ಉಡುಗೆ ತೊಡಿಗೆಗಳನ್ನು ಕಂಡು ಕ್ರಮಿತನು, "ಏನಾಯಿತು, ಹೆಗ್ಗಡೆಗಳೆ?" ಎಂದನು.