ಪುಟ:ಕ್ರಾಂತಿ ಕಲ್ಯಾಣ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬

ಕ್ರಾಂತಿಕಲ್ಯಾಣ

ನುಡಿಗಳನ್ನು ಕೇಳಿದಾಗಿನಿಂದ."

ಬ್ರಹ್ಮಶಿವನ ಉತ್ತರ ವಿಡಂಬನೆಯ ನುಡಿಗಳೇ ಅಥವಾ ಪರಿವರ್ತಿತ ಹೃದಯದ ಸತ್ಯದ ಕಿಡಿಗಳೇ ಎಂದು ಯೋಚಿಸುತ್ತ ಬೊಮ್ಮರಸನು ನಿದ್ರೆ ಮಾಡಿದನು. ಬ್ರಹ್ಮಶಿವನಿಗೆ ಆ ಮೊದಲೆ ನಿದ್ರೆ ಹತ್ತಿತ್ತು.

ಹೆಬ್ಬಾಗಿಲ ಭಾರವಾದ ಕದಗಳ ಅಗುಳಿ ಅಡ್ಡಹಲಿಗೆ ಸರಪಳಿಗಳನ್ನು ತೆಗೆಯುವ ಶಬ್ದ ಕೇಳಿ ಅವರು ಎಚ್ಚೆತ್ತರು. ಹುಲ್ಲಿನ ರಾಶಿಯನ್ನು ಹತ್ತಿದಷ್ಟೇ ನಿಶ್ಯಬ್ದವಾಗಿ ಕೆಳಗಿಳಿದು ಮಂಟಪದ ಹೊರಗೆ ಮರೆಯಲ್ಲಿ ನಿಂತರು. ಮೂಡಣ ದೆಸೆ ಕೆಂಪಡರಿತ್ತು. ಇನ್ನೂ ಸೂರ್ಯ ಹುಟ್ಟಿರಲಿಲ್ಲ.

ಸದಾಚಾರಿಮಠದ ಶಿವಕುಮಾರ ಸ್ವಾಮಿಗಳು ಬೆಳಗಾಗುವ ಮೊದಲೇ ಮಠದ ಹೆಬ್ಬಾಗಿಲನ್ನು ತೆಗೆಸಿ, "ನಮ್ಮ ರಾಯಣ್ಣಗೌಡ ಬಾಗಿಲು ಹಿಡಿಸದ ಹಾಗೆ ಹುಲ್ಲು ತುಂಬಿ ಕಳುಹಿಸಿದ್ದಾನೆ. ಗಾಡಿ ಮಂಟಪದಲ್ಲಿ ನಿಂತಿದೆ. ಕಟ್ಟು ಬಿಚ್ಚಿ ನಾಲ್ಕುಹೊರೆಗಳನ್ನ ತೆಗೆದರೆ ಆಮೇಲೆ ಗಾಡಿಯನ್ನು ಒಳಗೆ ತರಬಹುದು," ಎಂದು ಅನುಚರರಿಗೆ ಹೇಳಿದರು.

ಸಂಗಡಿದ್ದವರು ಆ ಕೆಲಸ ಮಾಡುತ್ತಿದ್ದಂತೆ ಸ್ವಾಮಿಗಳು ಮಠದ ಅಂಗಣದಲ್ಲಿದ್ದ ಅಶ್ವತ್ಥಕಟ್ಟೆಯ ಬಳಿ ನಿಂತು ತಮ್ಮ ಪದ್ಧತಿಯಂತೆ ಮೌನವಾಗಿ ಜಪಕ್ಕೆ ಪ್ರಾರಂಭಿಸಿದರು. ಹಗಲಿರುಳು ಕುಳಿತಾಗ, ನಿಂತಾಗ, ಮಲಗಿದಾಗ, ಅವಕಾಶ ಸಿಕ್ಕಿದಾಗಲೆಲ್ಲಾ ಷಡಕ್ಷರ ಮಂತ್ರವನ್ನು ಜಪಿಸುವುದು ಅವರ ವ್ರತ. ಅದಕ್ಕಾಗಿ ಅವರಿಗೆ "ಮಂತ್ರಲಕ್ಷ" ಎಂಬ ಅಡ್ಡ ಹೆಸರೂ ಬಂದಿತ್ತು.

ಮಠದ ಆಳುಗಳಿಬ್ಬರು ಕಟ್ಟುಗಳನ್ನು ಬಿಚ್ಚಲು ಗಾಡಿಯ ಮೇಲೆ ಹತ್ತಿದಾಗ ಬ್ರಹ್ಮಶಿವ, ಬೊಮ್ಮರಸರು ಹೆಬ್ಬಾಗಿಲನ್ನು ದಾಟಿ, ಸ್ವಾಮಿಗಳು ನಿಂತಲ್ಲಿಗೆ ಹೋಗಿ ಕಾಲುಗಳ ಮೇಲೆ ಬಿದ್ದು, "ಅಯ್ಯನವರು ಕಾಪಾಡಬೇಕು. ಪ್ರಾಣಭಯದಿಂದ ಓಡಿ ಬಂದಿದ್ದೇವೆ." ಎಂದು ಮೊರೆಯಿಟ್ಟರು.

ಶಿವಕುಮಾರ ಸ್ವಾಮಿಗಳ ತೀವ್ರದೃಷ್ಟಿ ಅವರ ಮೊಗಗಳತ್ತ ತಿರುಗಿತು. ಹೆಬ್ಬಾಗಿಲ ಪಾರ್ಶ್ವದ ಗೋಡೆಗೆ ಸಿಲುಕಿಸಿದ್ದ ಪಂಜಿನ ಬೆಳಕಿನಿಂದ ಅವರಲ್ಲೊಬ್ಬನು ಗಂಭೀರ ಪ್ರಕೃತಿಯ ಪ್ರೌಢನೆಂದೂ, ಇನ್ನೊಬ್ಬನು ಚಾಣಾಕ್ಷ ವಾಚಾಳಿ ತರುಣನೆಂದೂ ಸ್ವಾಮಿಗಳು ತಿಳಿದರು. "ನೀವು ಎಲ್ಲಿಂದ ಬಂದಿರಿ, ನಿಮ್ಮ ಹೆಸರೇನು?" ಎಂದು ತರುಣನನ್ನು ಕೇಳಿದರು.

ಬ್ರಹ್ಮಶಿವನು ಎದ್ದುನಿಂತು ಕೈ ಜೋಡಿಸಿ ಹೇಳಿದನು: "ಇವರು ಭಗವಾನ್