ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನನ್ನಪ್ಪನ ಮಾಸ್ತರ ನೌಕರಿ ಮತ್ತು ಪಂದ್ರಾ ಆಗಸ್ಟ್

೧೧೭

"ಕೆಲಸ ಮಾಡದೇ ಏನು ಪಗಾರ ತಗೊಳುದು" ಎಂದು ಅಜ್ಜಿಯ ಎದುರು
ಗೊಣಗುತ್ತಿದ್ದನಂತೆ. ಬೇರೆ ಕೆಲಸ ಹುಡುಕುವ ಹವಣಿಕೆಯಲ್ಲಿಯೂ ಇದ್ದನಂತೆ. ಆದರೆ
ಮುಂದೆ ಒಬ್ಬೊಬ್ಬರೇ ಮಕ್ಕಳು ಬರೋದಕ್ಕೆ ಆರಂಭ ಆಗಿ ಶಾಲೆಯೂ ಆರಂಭ ಆಯಿತಂತೆ.
ಕೆಲವರು ಕನಿಕರದಿಂದ, ಕೆಲವರು ಮಾಸ್ತರನ ಗುಣಗಾನ ಮಾಡಿ ಮಕ್ಕಳನ್ನು ಕಳ್ಳತಿದ್ರಂತೆ.
ಮುಂದೆ ಹನುಮಂತ ದೇವರ ಗುಡಿಯಲ್ಲಿಯೇ ಪಾಠ ಆರಂಭ ಆಗಿ ಬೆಳೀತಾ ಹೋಯಿತಂತೆ.

ನಾನು ಚಿಕ್ಕವನಿದ್ದಾಗ ಸ್ನೇಹಿತರೊಂದಿಗೆ ಓತಿಕ್ಯಾತನ ಬೇಟೆಯಾಡುತ್ತಾ ನಂತರ
ಅದನ್ನೂ ಮರೆತು, ಹುಣಸೆ ಚಿಗುರು ಕಾಯಿಗಾಗಿ ಅಲೆಯುತ್ತಾ ಆ ಹಳ್ಳಿಗೆ ಹೋಗಿದ್ದೆ.
ಆ ಹಳ್ಳಿಯ ದೇವಸ್ಥಾನದಲ್ಲಿ ನನ್ನಪ್ಪನ ಭಾವಚಿತ್ರ ಇತ್ತು. ಅದೊಂದು ಸಮೂಹದ
ಭಾವಚಿತ್ರ, ಅದು ನನ್ನ ಕೈಗೆ ನಿಲುಕುತ್ತಿರಲಿಲ್ಲ. ಅದನ್ನು ಹಿಡಿಯೋದಕ್ಕೆ ಕೈ ಚಾಚಿ
ಸಿಕ್ಕದೆ ಹೋದಾಗ ಮೆಲ್ಲನೆ ಜರೆಯುತ್ತ ಅಳುತ್ತ ಅಲ್ಲೇ ಕುಳಿತಿದ್ದೆ. ಆಗ ಸ್ನೇಹಿತರು
ನನ್ನನ್ನು ರಮಿಸಲು ಹುಣಸೆ ಕಾಯಿಗಳನ್ನೆಲ್ಲ ನನ್ನ ಮುಂದೆ ಹಾಕಿ "ಅಳಬೇಡ, ಅಳಬೇಡ"
ಎಂದು ರಮಿಸುತ್ತಿದ್ದರು. ಆಗ ನನ್ನ ಸ್ನೇಹಿತನೊಬ್ಬ ಬಾಗಿ ತನ್ನ ಬೆನ್ನು ಕೊಟ್ಟಿದ್ದ. ಅವನ
ಬೆನ್ನ ಮೇಲೆ ನಿಂತು ನನ್ನಪ್ಪನ ಭಾವಚಿತ್ರದ ಭಾಗವನ್ನು ಸವರಿ ಸವರಿ ಎಂಥದೋ
ಆನಂದ ಅನುಭವಿಸುತ್ತಿದ್ದೆ. ಈ ಸಂದರ್ಭ ಈಗ ಬರೆಯುತ್ತಿದ್ದರೂ ಕಣ್ಣು ನೆನೆದು
ಮಂಜಾಗುತ್ತಿದೆ, ಕಂಠ ತುಂಬಿ ಬರುತ್ತಿದೆ. ಆ ನನ್ನ ಸ್ನೇಹಿತನ ಬೆನ್ನು ಈಗಲೂ ನನ್ನ
ಕಾಲಡಿಯಲ್ಲಿ ಇದ್ದಂತೆ ಭಾಸವಾಗುತ್ತಿದೆ.

ನನ್ನಪ್ಪ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರೀಯ ದಳದಲ್ಲಿ ಸೇರಿ ಹೋರಾಟ
ಮಾಡಿದವನು. ಆ ಖಾದಿ ಬಟ್ಟೆಯಲ್ಲಿಯೇ ಎದೆಯುಬ್ಬಿಸಿ ನಿಂತು ತೆಗೆಸಿಕೊಂಡ ಭಾವಚಿತ್ರ
ಇಂದಿಗೂ ನಮ್ಮ ಹಳೆಯ ಮನೆಯಲ್ಲಿ ಜೋತಾಡುತ್ತಿದೆ. ಇಲ್ಲಿ ಆತನ ಹೋರಾಟದ
ಗಾಥಾ ಬರಯಲು ಹೊರಟಿಲ್ಲ. ಅಥವಾ ತೀರಾ ಸ್ವಾರಸ್ಯಕರವಾದ ಮತ್ತು ಪೌರುಷ
ಭರಿತವಾದ ಸಂದರ್ಭಗಳನ್ನು ಹೇಳಬಹುದಾಗಿತ್ತಾದರೂ ಅಂಥವೂ ನನಗೆ ತೀರಾ
ಮುಖ್ಯವೆನಿಸುತ್ತಿಲ್ಲ. ನನಗನಿಸಿದ ಒಂದು ಮಹತ್ವದ ಸಂದರ್ಭವನ್ನು ಮುಂದಿಡುತ್ತಿರುವೆ.
ಒಂದು ದಿನ ನನ್ನಪ್ಪ ವಿಜಾಪುರದಿಂದ ನಸುಕಿನಲ್ಲಿಯೇ ಬಂದವನೇ "ಏ ನಮಗ
ಸ್ವಾತಂತ್ರ್ಯ ಬಂತು, ಹೋಳಿಗಿ ಮಾಡು ಹೋಳಿಗಿ ಮಾಡು" ಎಂದು ಅವ್ವಾಗೆ ಹೇಳಿ
ಹೋಳಿಗೆ ಮಾಡಿಸಿದನಂತೆ. ಅಜ್ಜಿ "ಅಷ್ಟಾಕ ಹೋಳ್ಗಿ ಮಾಡೋದು" ಎಂದು ಬೇಸೂರು
ಎತ್ತಿದರೂ ಲೆಕ್ಕಿಸದೇ ಹೆಚ್ಚಿಗೆನೇ ಮಾಡಿಸಿ ಕೇರಿಯ ಮನೆ ಮನೆಗೆ ಹೋಗಿ ಅವರ
ಬಾಯಿಯಲ್ಲಿ ಹೋಳಿಗೆ ಇಟ್ಟು ಆ ಸಂಭ್ರಮವನ್ನು ಹಂಚಿಕೊಂಡದ್ದು ಆ ದಿನದ
ಮೊದಲನೆಯ ಕಂತಿನ ಕೆಲಸವಾಗಿತ್ತಂತೆ.

ಎರಡನೆಯ ಕಂತಿನ ಕೆಲಸ, ಅದಕ್ಕಿಂತಲೂ ಹುರುಪು ಹುಮ್ಮಸ್ಸಿನಿಂದ ಕೂಡಿದ್ದು.