ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೬

ಗೌರ್ಮೆಂಟ್ ಬ್ರಾಹ್ಮಣ


ಸಂಸ್ಕೃತಿ ಚಿಂತನೆಯಲ್ಲಿ ಅನೇಕ ಚಲನೆಗಳನ್ನು ಮಾಡುವಷ್ಟು ಗೌರ್ಮೆಂಟ್ ಬ್ರಾಹ್ಮಣ
ಕೃತಿಯು ಸಮರ್ಥವಾಗಿದೆ.

ಜನಾಂಗವಾದ (racism) ಇರುವ ಸಮಾಜದಲ್ಲಿ ಒಬ್ಬ ಕಪ್ಪು ವರ್ಣೀಯ, ಜಾತಿ
ಸಮಾಜವಿದ್ದಲ್ಲಿ ಒಬ್ಬ ಅಸ್ಪೃಶ್ಯ ವ್ಯಕ್ತಿ ತನ್ನ ಆತ್ಮಕಥೆ ಬರೆದಾಗ ಅದು ಒಬ್ಬ ವ್ಯಕ್ತಿಯ
ಕಥನವಾಗಿರುವುದಿಲ್ಲ. ಇಡೀ ಒಂದು ಸಮುದಾಯವೇ ಚರಿತ್ರೆಯಲ್ಲಿ ಅಪಮಾನದ,
ಬದುಕುಳಿಯಲು ಮಾಡಿದ ಸೆಣಸಾಡಿದ ಕಥಾನಕವಾಗಿರುತ್ತದೆ.... ಈ ಅರ್ಥದಲ್ಲಿ
'ಗೌರ್ಮೆಂಟ್ ಬ್ರಾಹ್ಮಣ' ಕೂಡ ಒಬ್ಬ ವ್ಯಕ್ತಿಯ ಚರಿತ್ರೆಯಲ್ಲ; ಮನುಷ್ಯರ ಹಸಿವನ್ನು
ಹಸಿವೆಂದರಿಯದ, ಅವರ ಭಾವನೆಗಳನ್ನು ಭಾವನೆಗಳೆಂದು ಗುರುತಿಸಲಾಗದ ಅವರ
ಪ್ರೇಮವನ್ನು ಪ್ರೇಮವೆಂದು ಒಪ್ಪಿಕೊಳ್ಳದ ಸಮಾಜವೊಂದರ ನಂಬಿಕೆ ಆಚರಣೆಗಳ
ಚರಿತ್ರೆ....

ಮಾಲಗತ್ತಿಯವರದು... ವೇದನೆ ತುಂಬಿದ ದಾರ್ಶನಿಕನಂತೆ ವಿವೇಚನೆ ಮಾಡುವ
ಗಂಭೀರ ಬರಹವಾಗಿದೆ. ಕೆಲವೊಮ್ಮೆ ಅವರು ಸಮಾಜದ ವರ್ತನೆಯನ್ನು ವಿಮರ್ಶೆ
ಮಾಡುವ ಸಿನಿಕತೆ ಎನಿಸುವ ಆಕ್ರೋಶದ ಅಂಚಿಗೂ ಸರಿಯುವುದುಂಟು. ಅವರ ಬರಹದ
ಶಕ್ತಿ ಇರುವುದು ಅತ್ಯಂತ ವಿಶಿಷ್ಟವಾದ ಅನುಭವಗಳಲ್ಲಷ್ಟೇ ಅಲ್ಲ ಆ ಅನುಭವಗಳನ್ನು
ನಿರೂಪಿಸಲು ಬಳಸುವ ಚಿತ್ರಮಯ ಭಾಷೆಯಲ್ಲಿ, ಈ ಬರಹಗಳು ಹೀಗಾಗಿ ಒಮ್ಮೆ
ಕವಿತೆಯಂತೆ ಮತ್ತೊಮ್ಮೆ ಪ್ರಬಂಧಗಳಂತೆ ಬಹಳ ಸಲ ಕತೆಗಳಂತೆ ಓದಿಸಿಕೊಳ್ಳುತ್ತವೆ.
ಮುಟ್ಟಿದರೆ ಮಿಡಿಯುತ್ತವೆ.

ರಹಮತ್ ತರೀಕೆರೆ

ಪ್ರಜಾವಾಣಿ ೨೬ ಫೆಬ್ರವರಿ ೯೫.

◼ ಗಂಭೀರ ಚರ್ಚೆಯ ಅವಶ್ಯಕತೆಯಿದೆ:

ಇಲ್ಲಿನ ಅನೇಕ ಅನುಭವಗಳು ವಿವರಗಳು ಹೊರಗೆ ಬರಲೇ ಬೇಡವೇ
ಪ್ರಕಟಿಸುವಾಗಲೇ ಬೇಡವೇ? ಎಂದು ತುಯ್ದಾಟದಲ್ಲಿ ಯಾತನೆ ವೇದನೆಯನ್ನು
ಅನುಭವಿಸಿವೆ. ಇಂಥ ಸಂಕೀರ್ಣತೆಯ ಸಂದಿಗ್ಧತೆ ವ್ಯಕ್ತಿ ಕೇಂದ್ರಿತ ನೆಲೆಯದೋ ಅಥವಾ
ಸಮಾಜ ಕೇಂದ್ರಿತ ನೆಲೆಯದೋ? ಜೊತೆಗೆ ಇದರಲ್ಲಿ ಯಾವುದು ಪ್ರಧಾನ. ಯಾವುದು
ಆನುಷಂಗಿಕ. ಈ ದಿಕ್ಕಿನಲ್ಲಿ ಗಂಭೀರ ಚರ್ಚೆಯ ಅವಶ್ಯಕತೆಯಿದೆ.

ಪುಸ್ತಕ ಮಾಹಿತಿ (ಹಂಪಿ)

ಬಿ.ಎಂ. ಪುಟ್ಟಯ್ಯ - ಅಕ್ಟೋಬರ್ ೯೪