ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


ಹೆಣದ ಮೇಲಿನ ದುಡ್ಡು ಮತ್ತು ಮದುವೆಯ ಊಟ

ನಮ್ಮೂರಲ್ಲಿ ಶ್ರೀಮಂತಿಕೆಗೆ ಹೆಸರಾದ ಮನೆತನಗಳೆಂದರೆ ಒಂದು ಶೇಠಜಿ, ಎರಡು ಮರಾಠಿಗರದು, ಮೂರನೆಯದು ವೀರಶೈವರ ಮನೆತನ. ಶೇಠಜಿಯವರ ಮನೆಗಳ ಕೆಲಸದಲ್ಲೆಲ್ಲ ಸಾಮಾನ್ಯ ವೀರಶೈವರದೇ ಕಾರುಬಾರು. ಮರಾಠಿಗರ ಮನೆಗಳಲ್ಲಿ ಇಸ್ಸಾಮಿಯರದೇ ಕಾರುಬಾರು. ಈ ಮೂರು ಮನೆತನಗಳಲ್ಲಿ, ಅವರವರ ನಡುವೆಯೇ ಸ್ಪರ್ಧೆ ಇತ್ತೆಂದು ತೋರುತ್ತದೆ. ದೇಣಿಗೆ ಕೊಡುವಲ್ಲಿ, ಮನೆ ಕಟ್ಟಿಸುವಲ್ಲಿ ಇದು ನಮಗೆ ಎದ್ದು ಕಾಣುತ್ತಿತ್ತು. ಇದಕ್ಕಿಂತ ಅವರು ನಮಗೆ ಶ್ರೀಮಂತರಾಗಿ ಕಾಣುವುದು ಅವರ ಮನೆಯಲ್ಲಿ ಯಾರಾದರೂ ಸತ್ತರೆ ಇಲ್ಲವೇ ಯಾರಾದರೂ ಹುಟ್ಟಿದರೆ, ಬೇರೆ ಮನೆತನಗಳೂ ಇವರಂತೆ ಸಂಪ್ರದಾಯ ಉಳ್ಳವರಾಗಿದ್ದರೂ ಅವರ ಹಾಗೆ ಎದ್ದು ಕಾಣುತ್ತಿರಲಿಲ್ಲ. ಹೀಗಿದ್ದಾಗ ಊರಲ್ಲಿ ಯಾರು ಸತ್ತರೂ ನಮಗೆ ಸಂತೋಷವೇ ಆಗುತ್ತಿತ್ತು.

ಆವತ್ತು ವೀರಶೈವರ ಮನೆಯಲ್ಲಿ ಯಾರೋ ಸತ್ತಿದ್ದರು. ಹೆಣ ಬ್ಯಾಂಡ್ ಬಾಜಾದೊಂದಿಗೆ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಹಣದ ಮೇಲೆ ಹಣ ತೂರುವುದೊಂದು ಸಂಪ್ರದಾಯ. ಅದು ಅವರಿಗೆ ಪ್ರತಿಷ್ಠೆಯ ಹೆಗ್ಗುರುತು ಆಗಿರಬೇಕು. ಯಾರ ಮನೆಯಲ್ಲಿ ಸತ್ತಿದ್ದಾರೆ, ಯಾರು ಸಂಪ್ರದಾಯವನ್ನು ಪಾಲಿಸುತ್ತಾರೆ ಎನ್ನುವುದನ್ನು ನನ್ನಜ್ಜಿ ಯಾವ ಮೂಲಗಳಿಂದ ತಿಳಿದುಕೊಳ್ಳುತ್ತಿದ್ದಳೋ ನಾನರಿಯೆ. ಇಂಥ ಆದಾಯ ಬರುವ ಮೂಲಗಳನ್ನು ನಮಗೆ ಹುಡುಕಿಕೊಡುತ್ತಿದ್ದಳು. ಹಣ ತೆಗೆದುಕೊಂಡು ಹೋಗುವಾಗ ಅವರು ನಮ್ಮನ್ನು ಅಷ್ಟೇ ಜಾಗರೂಕತೆಯಿಂದ ಗಮನಿಸುತ್ತಿದ್ದರೆಂದು ತೋರುತ್ತದೆ. ನಾವು ಬಂದಿರುವುದನ್ನು ಖಚಿತ ಪಡಿಸಿಕೊಂಡೇ ಹೆಣವನ್ನು ಮೇಲಕ್ಕೆ ಎತ್ತುತ್ತಿದ್ದರು. ಹೆಣದ ಮೇಲೆ ಅವರು ತೂರಿರುವ ಹಣ ನೆಲಕ್ಕೆ ಬಿದ್ದ ಮೇಲೆ ಕಚ್ಚಾಡಿ ಎತ್ತಿಕೊಳ್ಳುವುದು ದಲಿತರ ಕೆಲಸ. ದಲಿತರು ಇರದೆ ಹೋದರೆ ಅವರು ತೂರುವ ಹಣಕ್ಕೆ ಬೆಲೆಯಾದರೂ ಏನು? ಅವರು ಹಣ ತೂರಬೇಕು, ತೂರಿದ ಹಣ ಉರುಳುತ್ತ (ಹಾಸುಗಲ್ಲಿನ ರಸ್ತೆ ಇದ್ದಾಗ), ಹೆಣ ಹೊತ್ತವರ ಕಾಲಲ್ಲಿ, ಹಿಂದೆ ಅಳುತ್ತ ಬರುವವರ ಕಾಲಲ್ಲಿ ಹೋಗಬೇಕು. ಅವರು ಅದನ್ನು ದಾಟಿ ಪಾಪ ಕಳೆದುಕೊಳ್ಳಬೇಕು. ಅವರೆಲ್ಲ ತುಳಿದು ಹೋದ ಮೇಲೆ ನಾವು ಅದನ್ನು ಎತ್ತಿಕೊಳ್ಳಬೇಕು.

ವಯಸ್ಸಾದ ನಮ್ಮ ಜನ ಅವರಲ್ಲ ದಾಟಿ ಹೋಗುವುದೇ ತಡ, ಸ್ಪರ್ಧೆಗಿಳಿದು