ಹರಿವ ನೀರು ಎಂದೆನಲ್ಲವೇ? ಅದೇನು ದಬದಬನೆ ಬೀಳುವ ಜಲಪಾತದ ನೀರಲ್ಲ. ಎಲ್ಲಿಂದಲೋ ಹರಿದು ಬರುವ ನೀರದು. ಒಡೆದ ಒಗಟಂತೆ ಇದ್ದುದು. ಆ ಕಂದಕಕ್ಕೆ ನೀರು ಹರಿದು ಹೋಗಲು ಐದು ಕಮಾನುಗಳು, ಕಮಾನಿನ ಹಾಸುಬಂಡೆಗಳೆಲ್ಲ ಹಸಿರು ಪಾಚಿಗಳಿಂದ ಜೊಂಡುಗಟ್ಟಿದ್ದವು. ಹಾಸು ಬಂಡೆಗಳ ಮೇಲೆ ಕಾಲಿಡಬೇಕಾದರೆ ಮೈ ತುಂಬ ಕಣ್ಣಿರಬೇಕು. ದೇಹ ಕಡ್ಡಿಯಂತೆ ಸೆಟೆದು ಸಮತೋಲನದಲ್ಲಿರಬೇಕು, ಆಯ ತಪ್ಪಿದರೆ ಸಾಕು ಹಲ್ಲುಗಳೆಲ್ಲ ಕೈಯಲ್ಲಿಯೇ. ಅನಂತರ ನಡು ಕೈ ಕಾಲುಗಳಿಗೆ ಮೂರು ದಿನಗಳ ತನಕ ಉಸುಕಿನಿಂದ ಕಾವು ಕೊಡಬೇಕು.
ಕಂದಕದ ಒಳಗೆ, ಕಮಾನಿನ ಮುಂದೆ ಸ್ವಲ್ಪ ಬಯಲಾದ ಹಾಸು ಬಂಡೆಗಳ ಸ್ಥಳ. ಅಲ್ಲಿ ನಮ್ಮ ಜನತೆ ಬಟ್ಟೆ ತೊಳೆಯುವುದಕ್ಕಾಗಿ ಹೋಗುತ್ತಿದ್ದರು. ಅಂತೆಯೇ ನನ್ನ ತಾಯಿಯೂ ಕೂಡಾ. ಆಗ ಹೋಗುವವರ ಬೆನ್ನು ಹತ್ತಿ ತಿರುಗುವುದೊಂದು ಚಟ ನನಗೆ. ಬೇಡವೆಂದರೂ ಹಟ ಮಾಡಿ ಪೆಟ್ಟು ತಿಂದರೂ ಸರಿ, ಸಿಟ್ಟೂ ಮಾಡಿದರೂ ಸರಿ ಬಾಲ ಮಾತ್ರ ಬಿಡುತ್ತಿರಲಿಲ್ಲ.
ನನ್ನ ದಲಿತ ಕೇರಿಯ ಜನ ಬಟ್ಟೆ ತೊಳೆಯುವುದಕ್ಕಾಗಿ ಹೋಗುವ ಸ್ಥಳಗಳು ಮೂರು. ಒಂದು ನಮ್ಮೂರ ಕೆರೆ, ಈ ಕೆರೆಗೆ ಐದು ಕಡೆಗಳಲ್ಲಿ ಬಟ್ಟೆ ತೊಳೆಯುವ ಕಲ್ಲುಗಳನ್ನು ಹಾಕಲಾಗಿದೆ. ಒಂದೊಂದು ಭಾಗದ ಒಗೆಕಲ್ಲುಗಳಿಗೆ ಒಂದೊಂದು ಸಮಾಜದ ಜನಗುತ್ತಿಗೆ ಹಿಡಿದಂತೆ ಪದ್ಧತಿ. ನಮ್ಮ ಕೇರಿಯ ಜನರಲ್ಲಿ ನಮ್ಮ ಮನೆಯವರೇ ಮೊದಲ ಬಾರಿಗೆ ಊರ ಕೆರೆಯಲ್ಲಿ ಬಟ್ಟೆಯನ್ನು ತೊಳೆಯುವ ಸಾಹಸ ಮಾಡಿದವರು. ಈಗಲೂ ಕೆಲ ಜಾತಿಯ ಜನ ಅಲ್ಲಿಗೆ ಬಟ್ಟೆ ತೊಳೆಯಲು ಹೋಗುವುದಿಲ್ಲವೆಂದರೆ ನಿಮಗೆ ಆಶ್ಚರ್ಯವೆನಿಸಬಹುದು. ಆದರೆ ವಸ್ತು ಸ್ಥಿತಿ ಹಾಗೇ ಇದೆ. ನಜೀರ ಸಾಬರು ಹಾಕಿಸಿದ ಕೊಳವೆ ಬಾವಿಗಳು ಈ ಸ್ಥಿತಿಗೆ ಸಹಕರಿಸಿವೆ.
ನನ್ನವ್ವೆಯರು ಕೆರೆಗೆ ಬಟ್ಟೆ ತೊಳೆಯಲು ಒಟ್ಟಾಗಿಯೇ ಹೋಗುತ್ತಿದ್ದರು. ಜೊತೆಗೆ ಪಕ್ಕದ ಎರಡು ಮೂರು ಮನೆಯ ಹೆಂಗಸರನ್ನೂಕರೆದುಕೊಂಡು ಹೋಗುತ್ತಿದ್ದರು. ಒಂದು ರೀತಿಯಲ್ಲಿ ಇದು ಸೈನ್ಶ ಕಟ್ಟುವ ಪದ್ಧತಿ. ಯಾರಾದರೂ ಮೇಲು ಜಾತಿಯ ಜನ ಒಬ್ಬರು. ಕದನಕ್ಕೆ ಬಂದರೆ ಸಾಕು, ಕೇರಿಯ ಎಲ್ಲಾ ಬಾಯಿಗಳೂ ಒಂದುಗೂಡಿಬಿಡುತ್ತಿದ್ದವು. ಮೇಲು ಜಾತಿಯವರೋ ಜಾತಿಯ ಹೆಸರು ಹೇಳಿ ಗುರುತಿಸಿ ಹಾವು ಕಂಡಂತೆ ಹೆದರಿ ಮುಖ ಕಿವುಚಿ ತಾತ್ಸಾರ ಭಾವನೆಯಿಂದ ನೋಡುತ್ತಿದ್ದರು.
"ಊರ ಹೊರಾಗ ಕೊಳ್ಳಾದ, ಗರಸಿನ ತಗ್ಗದ
ಅಲ್ಲಗಿ ಹೋಗಬಾಡ್ದ? ಇಲ್ಲ್ಯಾಕ ಬರಬೇಕು?
ಏನು ದೊಡ್ಡ ಜಾತಿಯವರಂಗ ಕೆರಿಗಿ ಬರ್ತಾವು......."