ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೌಮೆಂಟ್ ಬ್ರಾಹ್ಮಣನ ರಾಘವೇಂದ್ರ ಭಕ್ತ ಭಾವಚಿತ್ರವನ್ನು ಮಠಕ್ಕೆ ತಂದಾಗ ಅರ್ಚಕರು ಸಂತೋಷದ ಹಿಗ್ಗಿನಲ್ಲಿಯೇ ಇದ್ದರು. ಮಠದ ಪ್ರಾಕಾರದಲ್ಲಿಯೇ ಭಾವಚಿತ್ರದ ಮೇಲೆ ತೀರ್ಥದ ತುಂತುರು ಅಭಿಷೇಕ (ಶುದ್ದೀಕರಣ?) ಮಾಡಿ ಪೂಜೆ ನಡೆಸಿದರು. ನನಗಿದಾವುದರ ಪರಿವೇ ಇರಲಿಲ್ಲ. ಆದರೆ ತುಂತುರು ಹನಿಯ ನೀರು ಗಾಜಿನಿಂದ ಕಟ್ಟಿನಲ್ಲಿ ಇಳಿದು ಒಳಗಿರುವ ಭಾವಚಿತ್ರ ಒದ್ದೆಯಾಗುವುದೇನೋ ಎನ್ನುವ ಕೊರಗು ನನ್ನೊಳಗೆ ಕೊರೆಯುತ್ತಿತ್ತು. ಭಾವಚಿತ್ರ ನೋಡಿ ನೋಡಿ ಉಗುಳು ನುಂಗುತ್ತಿದ್ದೆ. ಭಾವಚಿತ್ರದ ಮೇಲೆ ಒಂದು ಇಂಚಿನ ಗಾತ್ರದ ಅಕ್ಷರಗಳಲ್ಲಿ ಶ್ರೀ ಎ. ವಾಯ್. ಮಾಲಗತ್ತಿ ಎಂದು ಬರೆದಿದ್ದೆ. ಅದು ಭಾವಚಿತ್ರದಲ್ಲಿಯೇ ಒಡೆದು ಕಾಣುತ್ತಿತ್ತು. ಮಠದ ಪ್ರಾಕಾರ ಸುತ್ತುವಾಗ ಮಠದಲ್ಲಿಯ ಭಾವಚಿತ್ರ, ಭಾವಚಿತ್ರದಲ್ಲಿಯ ನನ್ನ ಹೆಸರು ನೋಡಿ ನೋಡಿ ಹಿಗ್ಗುತ್ತಿದ್ದೆ. ಒಳಗೆ ಗರಿಕೆದರಿದ ನವಿಲು ಕುಣಿಯುತ್ತಿತ್ತು. ಆ ಕುಣಿತಕ್ಕೆ ಅನುಗುಣವಾಗಿ ತಲೆಯ ಮೇಲಿನ ತುರಾಯಿ ಸೆಟೆದು ನಿಲ್ಲುತ್ತಿತ್ತು. ಬ್ರಾಹ್ಮಣರ ಮಠದಲ್ಲಿ ಒಬ್ಬ ಹರಿಜನನ ಹೆಸರು ಮೆರೆಯುತ್ತಿದೆ ಎನ್ನುವ ಜಂಬ ನನ್ನಲ್ಲಿ ಮನೆ ಮಾಡಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಆ ಮಠದಲ್ಲಿಯ ಭಾವಚಿತ್ರ ಮಾಯವಾಯಿತು! ಅರ್ಚಕರಿಗೆ ವಿಚಾರಿಸಿದರೆ ಇಂಗು ತಿಂದ ಮಂಗನ ಭಾವದಲ್ಲಿ ಖೇದವನ್ನು ವ್ಯಕ್ತಪಡಿಸುವಂತೆ "ಮೊಳೆ ಕಿತ್ತು ಬಿದ್ದು ಗಾಜು ಒಡೆದು ಹೋಯ್ತು ಅದಕ್ಕೆ ಅದನ್ನು ತೆಗ್ಗು ಒಳಗಿಟ್ಟಿದೆ" ಎಂದು ಉತ್ತರಿಸಿದರು. ಮೇಲೆ ಗೋಡೆ ನೋಡಿದರೆ, ಗೋಡೆಯಲ್ಲಿಯ ಮೊಳೆ ಭದ್ರವಾಗಿತ್ತು! ಆದರೆ ಭಾವಚಿತ್ರವಿರಲಿಲ್ಲ. "ನಾಳೆ ಮತ್ತೆ ಗೊಡೆಯ ಮೇಲೆ ಭಾವಚಿತ್ರ ಬರಬಹುದು" ಎನ್ನುತ್ತ ದಿನವೂ ಮಠಕ್ಕೆ ಹೋಗಿ ಗೋಡೆ ನೋಡುತ್ತಿದ್ದೆ. ಬರಿದಾದ ಗೋಡೆಯಲ್ಲಿ ಮೊಳೆ ಮಾತ್ರ ಕಾಣುತ್ತಿತ್ತು. ಅರ್ಚಕರು ನನ್ನನ್ನು ನೋಡಿದಾಗಲೆಲ್ಲ ನೋಡಿಯೂ ನೋಡದಂತೆ ಇದ್ದು ಕೆಲಸದಲ್ಲಿ ಸೇರಿಹೋಗಿದ್ದಾರೇನೋ ಎನ್ನುವಂತೆ ನಟಿಸುತ್ತಿದ್ದರು. ಮತ್ತೆ ಕೇಳುವ ಧೈರ್ಯವೂ ಮಾಡಲಿಲ್ಲ. "ನಾನು ಮತ್ತೊಮ್ಮೆ ಗಾಜಿನ ಹರಳು ಹಾಕಿಸಿ ಕೊಡುತ್ತೇನೆ ಕೊಡಿ' ಎಂದು ಕೇಳುವ ಧೈರ್ಯವೂ ನನಗೆ ಬರಲಿಲ್ಲ. ಊರಿಗೆ ಹೋದಾಗ, ಮಠದ ಹತ್ತಿರ ಸುಳಿದಾಗ ಆ ಭಾವಚಿತ್ರ ನೆನಪಾಗುತ್ತದೆ. "ನೀನು ಹೋಗಿ ನೋಡುವುದು ಬೇಡ, ಆ ಭಾವಚಿತ್ರ ಅಲ್ಲಿಲ್ಲ" ಎಂದು ಮನಸ್ಸು ಹೇಳಿದರೂ ಕಾಲುಗಳು ಮತ್ತೆ ಆ ಕಡೆಗೆ ಎಳೆದೊಯ್ಯುತ್ತವೆ. ಇನ್ನೊಂದು ಒಳಮನಸ್ಸು "ಅವರು ಮತ್ತೆ ಯಾಕೆ ಗೋಡೆಗೆ ಹಾಕಿರಬಾರದು ಎಂದು ಪ್ರಶ್ನಿಸಿ ನೋಡುವಂತೆ ಮಾಡುತ್ತದೆ. ಬೆಳ್ಳನೆಯ ಗೋಡೆಯಲ್ಲಿ ಆ ಕಪ್ಪು ಮೊಳೆ ಮಾತ್ರ ಕಂಡಂತಾಗುತ್ತದೆ. ಈಗ ಅರ್ಚಕರು ಬದಲಾಗಿದ್ದಾರೆ. ಬೇರೆ ಬೇರೆ ಭಾವಚಿತ್ರಗಳು ಬಂದಿವೆ. ನಾ ಬರೆದ ಭಾವಚಿತ್ರ ಮಾತ್ರ ಅಲ್ಲಿಲ್ಲ. ದಿನಗಳು ಉರುಳಿವೆ. ಗೋಡೆಗೆ ಬಡಿದ ಮೊಳೆ ಈಗಲೂ