ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೦
ಚಂದ್ರಮತಿ.


ಕೊಳ್ಳಬೇಕಾದ ಧರ್ಮಗಳೊಳಗೆ ಕೆಲವನ್ನು ಮಾತ್ರ ಈಗ ಸಂಗ್ರಹಿಸಿ ಹೇಳಿ, ಬಂಧುಗಳ ವಿಷಯದಲ್ಲಿ ಆಚರಿಸಬೇಕಾದ ಧರ್ಮಗಳನ್ನು ಮತ್ತೊಂದು ಬಾರಿ ತಿಳಿಸುವೆನು. ಮಳೆಗೂ ಬಿಸಲಿಗೂ ತಾನು ಗುರಿಯಾಗಿದ್ದರೂ ಇತರರಿಗೆ ನೆಳಲನ್ನೂ ಹಣ್ಣುಗಳನ್ನೂ ಕೊಡುವ ವೃಕ್ಷಗಳ೦ತೆಯೇ ಸಕಲರೂ ತಾವು ಕಷ್ಟ ಪಡುತ್ತಿದ್ದರೂ ಸೈರಿಸಿಕೊಂಡು ಪರೋಪಕಾರವನ್ನು ಮಾಡುವುದಕ್ಕೆ ಪ್ರಯತ್ನಿಸಬೇಕು.

ಚಂದ್ರ-ಯೋಗ್ಯಾಯೋಗ್ಯ ವಿಚಾರವನ್ನು ಮಾಡದೆ ಸಕಲರಿಗೂ ಉಪಕಾರವನ್ನು ಮಾಡುತ್ತಿರಬೇಕೇ?

ಗುರು-ಸಜ್ಜನರಿಗೆ ಮಾಡುವ ನ್ಯಾಯವಾದ ಸಾಹಾಯ್ಯವೇ ಉಪಕಾರವೆನಿಸಿಕೊಳ್ಳುವುದಲ್ಲದೆ ಶಿಷ್ಟ ದುಷ್ಟರೆಂಬ ವಿಚಕ್ಷಣೆಯಿಲ್ಲದೆ ಮಾಡುವ ಸಾಹಾಯ್ಯವು ಉಪಕಾರವೆನಿಸಿಕೊಳ್ಳುವುದಿಲ್ಲ. ಆದುದರಿಂದಲೇ ಕಳ್ಳರು ಮೊದಲಾದವರಿಗೆ ನಾವು ಸಾಹಾಯ್ಯವನ್ನು ಮಾಡಿದರೆ, ಉಪಕಾರ ಮಾಡಿದವರಾಗದಿರುವುದೊಂದಲ್ಲದೆ ಶಿಕ್ಷಾರ್ಹರೂ ಆಗುವೆವು.

ಚಂದ್ರ-ಉಳಿದ ಧರ್ಮಗಳನ್ನು ತಿಳಿಸುವಿರಾ?

ಗುರು-ನಾವೆಷ್ಟು ಬಡತನದಲ್ಲಿದ್ದರೂ ಕಂಡವರ ಪದಾರ್ಥವನ್ನು ಮುಟ್ಟಬಾರದು. ಕಳ್ಳತನ ಮಾಡಿದವರನ್ನು ಇಹಲೋಕದಲ್ಲಿ ರಾಜನು ಶಿಕ್ಷಿಸುವನು; ನಾವು ಕದ್ದಾಗ ಯಾರೂ ನೋಡಲಿಲ್ಲವೆಂದು ತಿಳಿದುಕೊಂಡರೂ ಕಳ್ಳತನವು ಮಾತ್ರ ಯಾವಾಗಲೋ ಬಯಲಾಗದಿರದು. ಒಂದು ವೇಳೆ ರಹಸ್ಯವಾಗಿದ್ದರೂ ಸರ್ವಜ್ಞನಾದ ಭಗವಂತನನ್ನು ಮೋಸಗೊಳಿಸುವುದಕ್ಕಾಗುವುದಿಲ್ಲ. ಆದುದರಿಂದ ಪರಲೋಕದಲ್ಲಿಯಾದರೂ ಶಿಕ್ಷೆಯಾಗ ದಿರದು. ಅದುಕಾರಣ ಎಷ್ಟು ಕಷ್ಟಗಳು ಸಂಭವಿಸಿದರೂ, ಪ್ರಾಣಾಪಾಯವೇ ಉ೦ಟಾದರೂ ಕಳ್ಳತನವನ್ನು ಮಾತ್ರ ಮಾಡಬಾರದು. ನಮಗೆ ಯಾರಾದರೂ ಹೆಚ್ಚಾದ ಉಪಕಾರವನ್ನು ಮಾಡಿದ್ದರೆ ಅದನ್ನು ನಾವು ಮರೆಯದೆ ಸಾಧ್ಯವಾಗುವ ಪಕ್ಷದಲ್ಲಿ ಪ್ರತ್ಯುಪಕಾರವನ್ನು ಮಾಡಬೇಕು ; ಕೃತಘ್ನನಾದವನನ್ನು ಸಕಲರೂ ದ್ವೇಷಿಸಿ ಅವನಿಗೆ ಕೇಡನ್ನೇ ಬಗೆಯುವರು. ಪರರ ಸಂಪತ್ತನ್ನು ಕಂಡು ನಾವು ಯಾವಾಗಲೂ ಕರುಬಬಾರದು ; ಈ ಅಸೂಯಾಗುಣವು ತಾನು ಸೇರಿದ ಸ್ಥಳವನ್ನೆಲ್ಲ ನಿರಂತರವೂ ಬೆಂಕಿಯಂತೆ