ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೨
ಚಂದ್ರಮತಿ.


ನಮಗೆ ಕೇಡನ್ನೇ ಮಾಡಿದರೂ ಮಾತಿನಿಂದಾಗಲೀ ಮುಖಭಾವದಿಂದಾಗಲಿ ಆವ ವಿಕಾರವನ್ನೂ ತೋರಿಸಲಾಗದು. ಅಹಂಕಾರವೇ ಮೊದಲಾದ ಇತರ ದುರ್ಗುಣಗಳನ್ನು ಬಿಟ್ಟು ಸರ್ವರಿಗೂ ನಮ್ಮ ಮೇಲೆ ಪ್ರೀತಿಯುಂಟಾಗುವಂತೆ ನಡೆದುಕೊಳ್ಳಬೇಕು. ನಾವು ಸುಗುಣವುಳ್ಳವರೇ ಆಗಿದ್ದರೂ, ನಾವು ಮಾಡುವ ಸಹವಾಸಗಳನ್ನು ನೋಡಿಯೇ ಜನರು ನಮ್ಮ ಗುಣಗಳಿಂತಹುದೆಂದು ನಿರ್ಣಯಿಸುವರು; ದುಸ್ಸಹವಾಸಗಳಿಂದ ಸಜ್ಜನರು ಕೆಟ್ಟುಹೋಗಿರು ವುದನ್ನೂ, ಒಳ್ಳೆಯವರ ಬೋಧನೆಯಿಂದ ದುಷ್ಟರು ಸುಜನರಾಗಿರುವುದನ್ನೂ ಎಷ್ಟೊಸ್ಥಳಗಳಲ್ಲಿ ನಾವೇ ನೋಡಿರುವೆವು. ಆದುದರಿಂದ ಆವಾಗಲೂ ದುಸ್ಸಹವಾಸವನ್ನು ಬಿಟ್ಟು ಸತ್ಸಾಂಗತ್ಯವನ್ನು ಹೊಂದಿ ಬಾಳುವುದೇ ಯುಕ್ತವಲ್ಲವೆ?

ಚಂದ್ರ-ಸಮಸ್ತ ಕಾರ್ಯಗಳಲ್ಲಿಯೂ ನಾವು ಹೀಗೆಯೇ ಪ್ರವರ್ತಿಸಬೇಕೆಂದು ತಿಳಿಸುವಂತಹ ವಿಧಿಯು ಆವುದಾದರಿರುವುದೇ?

ಗುರು-ನಿರಂತರವೂ ಸತ್ಯವನ್ನು ಹೇಳಬೇಕೆಂದು ನಾನು ತಿಳಿಸುವುದಕ್ಕೆ ಮೊದಲೇ ನಿನಗಾವಿಷಯವು ತಿಳಿದಿದ್ದಿತಲ್ಲವೆ? ನಾನು ಅಸತ್ಯವನ್ನು ಹೇಳೆಂದು ನಿನಗೆ ಬೋಧಿಸಿದರೂ ನೀನು ನನ್ನ ಮಾತುಗಳನ್ನು ನಂಬಲಾರೆ. ಯುಕ್ತಾಯುಕ್ತತೆಗಳನ್ನು ಬೋಧಿಸುವ ಅಂತರಾತ್ಮನು ಹೃದಯದೋಳಗಿರುವುದು. ಅದು ನಮಗೆ ಧರ್ಮಾಧರ್ಮಗಳನ್ನು ಬೋಧಿಸುವುದು ಮಾತ್ರವೇ ಅಲ್ಲದೆ, ಪಾಪಕಾರ್ಯಗಳನ್ನು ಮಾಡಿದಾಗ ಸಂತಾಪ ಯವನ್ನೂ, ಪುಣ್ಯಕಾರ್ಯಗಳನ್ನು ಮಾಡಿದಾಗ ಸಂತೋಷವನ್ನೂ ಉಂಟು ಮಾಡುವುದು. ಸ್ವವಿಷಯದಲ್ಲಿ ಆವಾವುದನ್ನು ನಮಗಿತರರು ಮಾಡ ಬೇಕೆಂದು ಬಯಸುವೆವೋ ಆಯಾ ಫಲಗಳನ್ನು ನಾವೂ ಇತರರಿಗೆ ಮಾಡಬೇಕು; ಆವಾವುದನ್ನು ನಮಗೆ ಇತರರು ಮಾಡಬಾರದೆಂದು ಅಪೇಕ್ಷಿಸುವೆವೋ ಆಯಾಕಾರ್ಯಗಳನ್ನು ನಾವೂ ಇತರರಿಗೆ ಮಾಡಲಾಗದು. ಇದೊಂದೇ ಸರ್ವನೀತಿಗಳ ಸಾರವು. ಸಾಧಾರಣವಾಗಿ ಸಂತೋಷಸಮಯಗಳಲ್ಲಿ ಎಲ್ಲರೂ ಸನ್ಮಾರ್ಗಿಗಳಾಗಿಯೇ ಇರಬಹುದು. ಆಪತ್ಸಮಯಗಳಲ್ಲಿಯೂ ಕಷ್ಟಗಳನ್ನೆಲ್ಲ ಸೈರಿಸಿಕೊಂಡು, ಧರ್ಮಚ್ಯುತರಾಗದೆ ಇರುವಂತಹ ಮಹನೀಯರು ಮಾತ್ರ ಸಾಣೆ ಹಿಡಿದಷ್ಟೂ ಬೆಳಗುವ ವಜ್ರದಂತೆ ಪ್ರಕಾಶಮಾನರಾಗಿ ಕೀರ್ತಿವಂತರಾಗುವರಲ್ಲದೆ ಉಳಿದವರು ಕೇಡಿಗೀಡಾಗುವರು.