ವಿಷಯಕ್ಕೆ ಹೋಗು

ಪುಟ:ಚೆಲುವು.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

ಕಣ್ಣೀಗ ಕಾಣುತಿಹ ಚೆಲುವ ನೋಟಕ್ಕೆ
ಮಿಗಿಲಾದ ಚೆಲುವು ಇರಬಹುದೆ ಲೋಕದಲಿ?
ಇನ್ನಿದಕೆ ಮೆರುಗಿಡುವ ಕಲೆ ಒಂದು ಉಂಟೆ?
ಸೊಗಸು ಇನ್ನಿನಿಸಾದರೂ ಮುಂಚಬಹುದೆ?
ಎಂದು ಮನ ಆನಂದದಲಿ ಕೇಳುತಿರಲು
ಮುಂದೆ ಕಂಡುದು ಎಲ್ಲ ಚೆಲುವಿಕೆಯ ಹುರುಳು.


ನಗೆ ಮೊಗದ ತಿಳಿಗಣ್ಣ ನಳಿದೋಳ ಚೆಲುವೆ-
ಬಳಿಯರ ಬಾಳ ಬೆಳಕಾಗಿರ್ಪಳಹುದು-
ಚಿಗರಿಯಂದದ ಹಗುರವಾದ ನಡೆಯಿಂದ
ಹೊಳೆಗೆ ಕೊಡ ಹಿಡಿದು ತಾನಿಳಿತಂದಳಾಗ;
ಮುಟ್ಟಿದುದು ಮುಗಿಲನಾಕ್ಷಣ ಚೆಲುವ ಶಿಖರ;
ಸೃಷ್ಟಿಯಂದಕೆ ಹೆಣ್ಣಿನಂದ ಮಣಿಮುಕುರ.


ಮಗುವಾಗಿ ತಾಯ್ತಂದೆವಿರ ಮನವ ನಲಿಸಿ,
ಸತಿಯಾಗಿ ಪತಿಯ ಹೃದಯದ ಸುಖವ ಸಲಿಸಿ,
ಜಗದಂಬೆಯವತಾರದಂತೆ ಕಳಕಳಿಸಿ
ಸುತರ ಹಡೆದೆ ಮುದ್ದಾಡಿ ಸಲೆ ಬೆಳೆಸಿ,
ಲಲನೆ ಅಂದುದ್ದೇಶಿಸದೆ ಕಣ್ಣ ತಣಿಸಿ
ಸುಳಿದಳೆದುರಿಗೆ ನನ್ನ ಆತುಮವ ಮಣಿಸಿ,