ವಿಷಯಕ್ಕೆ ಹೋಗು

ಪುಟ:ಜಾಗರ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆ / ೯೩


ಭೀಮ - ಈ ಪಾತ್ರಗಳಿಗೆ ಪೀಠಿಕೆ ಅವಶ್ಯವಿಲ್ಲ. ಇವೇ ಪಾತ್ರಗಳಿಗೆ ಬೇರೆ ಪ್ರಸಂಗ ಗಳಲ್ಲಿ ಪೀಠಿಕೆ ಬೇಕಾಗಬಹುದು. ಸನ್ನಿವೇಶದ ಬಿಗಿ, ಪಾತ್ರದ ಸ್ಥಾನ, ಪ್ರಸಂಗದ ಆವರಣಗಳಿಗೆ ಅನುಕೂಲವಾಗಿ ಪೀಠಿಕೆ ಹೇಳಬೇಕು. ಕೃಷ್ಣಾರ್ಜುನ ಕಾಳಗದ ಕೃಷ್ಣ ತಾನು “ಅರ್ಜುನನ ಪರೀಕ್ಷೆಗಾಗಿ ಹೀಗೆ ಮಾಡುತ್ತಿದ್ದೇನೆ.” ಎಂದು ಮೊದಲೇ ಹೇಳಿಕೊಂಡರೆ ನಾಟಕೀಯತೆ ಸಡಿಲಾಗುತ್ತದೆ. ಸ್ವತಂತ್ರ ಕಲ್ಪನೆ ಗಳನ್ನು, ಮೂಲ ಕಾವ್ಯಗಳ ಸೊಗಸನ್ನು, ತನ್ನ ರಚನಾ ಕೌಶಲವನ್ನು ತರಲು ಪೀಠಿಕೆ ಒಂದು ಒಳ್ಳೆಯ ಮತ್ತು ಹೆಚ್ಚು ಮುಕ್ತವಾದ ಸಂದರ್ಭ.
ಪದ್ಯಗಳನ್ನು ಆಧರಿಸಿ ಆಡುವ ಮಾತು (ಅರ್ಥ) ಪ್ರಸಂಗವನ್ನಾಧರಿಸಿ ತಯಾರಾಗುವ ನಾಟಕ. ಪದ್ಯದ ಅರ್ಥವನ್ನು ತನ್ನ ಪುರಾಣಾನುಭವ, ಲೋಕಾ ನುಭವ, ಕಾವ್ಯಾನುಭವ, ಸ್ವಂತ ಕಲ್ಪನೆಗಳಿಂದ ಪೋಣಿಸಿ ಹೇಳಬೇಕು. ಆದರೆ ಬೇರೆ ಬೇರೆ ವಿಷಯಗಳನ್ನು ತರುವ ಉತ್ಸಾಹದಲ್ಲಿ ಪದ್ಯವನ್ನು ಮರೆತು, ಪದ್ಯದ ಚೌಕಟ್ಟನ್ನು ಮೀರಿ, ಅರ್ಥ ಮು೦ದುವರಿದರೆ ಕಷ್ಟ, ಪ್ರತಿಯೊಂದು ಪದ್ಯವೂ ಅರ್ಥಗಾರಿಕೆಗೆ ಒಂದು ಸೀಮೆಯನ್ನು ಹೇರುತ್ತದೆ. ಇಂತಹ ಮಿತಿಯನ್ನು ಗುರು ತಿಸುವುದು ಅರ್ಥಧಾರಿಯ ಮೊದಲ ಹೊಣೆ, ಸಂಗತಿಗಳು ಪದ್ಯದಲ್ಲಿರುವ ಶಬ್ದ ಗಳಿಗೂ, ಅರ್ಥಕ್ಕೂ ಬೆಸುಗೆ ಬೇಕು. ಒಂದು ಪದ್ಯದ ಅರ್ಥ, ವಾದ, ಇವುಗಳ ಕೊನೆ ಮುಂದಿನ ಪದ್ಯದ ಬುಡಕ್ಕೆ ಅಭಿಮುಖವಾಗಿ ಹೋಗಬೇಕು. ಮುಂದಿನ ಹಾಡನ್ನು ಗಣಿಸದೆ ಮಾತಾಡುವವರೊಂದಿಗೆ ಅರ್ಥ ಹೇಳುವುದು ದೊಡ್ಡ ಪ್ರಯಾಸದ ಕೆಲಸ ಸರಸ, ಸಂವಾದ, ವಿವೇಚನೆಗಳಿರುವ ಸಂದರ್ಭಗಳಲ್ಲಿ ಜತೆ ಪಾತ್ರಗಳು ಕೂಡಿ ಅರ್ಥ ಹೇಳುತ್ತ ಹೋಗಬೇಕು. ಅಂದರೆ ಸ್ವಲ್ಪ ಸ್ವಲ್ಪವಾಗಿ ಹೇಳಿ ಕುತೂಹಲ, ಸ್ವಾರಸ್ಯ ನಿರ್ಮಿಸುತ್ತ ಇದಿರಾಳಿಯಿಂದ ಪ್ರಶ್ನೆ ಬರುವಂತೆ ಮಾಡಿ, ಮುಂದುವರಿದರೆ ಸೊಗಸು. ಈ ಚುಟುಕು ಸಂವಾದ ಪದ್ಧತಿ ಈಗೀಗ ಹೆಚ್ಚು ಬಳಕೆಗೆ ಬಂದಿದೆ. ಸ್ವರದ ಏರಿಳಿತ ಶಬ್ದಗಳು ಹೊರಡುವ ಕ್ರಮ, ನಿಲುಗಡೆ, ಅರ್ಥಪೂರ್ಣ ಮೌನ ಇವುಗಳ ಮೂಲಕ ಭಾವಾಭಿನಯ ಸಾಧಿಸಬೇಕು. ಪ್ರತಿಯೊಂದು ಪದ್ಯದ ಪದದ ತೂಕ, ಶಾಂತಿ, ಅಳತೆ, ಪದ್ಯ ಗರ್ಭಗಳನ್ನು ತಿಳಿದು ತೂಗಿ ಅರ್ಥ ಹೇಳುವುದು ಕವಿ ಪ್ರತಿಭೆ ಇದ್ದವನಿಗೇ ಸಿದ್ಧಿಸುವಂತಹದು.
ಅರ್ಥಧಾರಿಗೆ ಪ್ರಸಂಗದ ಪದ್ಯಗಳು ಕಂಠಪಾಠ ಇರಬೇಕು. ಕಡಿಮೆ ಪಕ್ಷ ಪದ್ಯಗಳ ಅನುಕ್ರಮ, ಕತೆಯ ನಡೆ ತಿಳಿದಿರಬೇಕು. ಪ್ರಸಂಗಕ್ಕೆ ಆಧಾರ ಇರುವ ಕಾವ್ಯ ಮತ್ತು ಮೂಲಕಾವ್ಯದ ಪರಿಚಯ ಇದ್ದರೆ ಒಳ್ಳೆಯದು.
ಅರ್ಥಗಾರಿಕೆಯ ಭಾಷೆ, ಲಯ, ವೇಗ, ಆವೇಶ, ಸೌಮ್ಯ, ತೀವ್ರತೆ, ಪ್ರಶಾಂತತೆ, ಸ್ವರಭಾರ, ವಾಕ್ಯರಚನೆ, ಪದಪ್ರಯೋಗ ಉಪಮಾನಾದಿಗಳೆಲ್ಲ ಪಾತ್ರದ ಸ್ವಭಾವಕ್ಕೂ, ಸನ್ನಿವೇಶಕ್ಕೂ ಅನುಗುಣವಾಗಿ ಇರಬೇಕಾದುದು ಅವಶ್ಯ.