ವಿಷಯಕ್ಕೆ ಹೋಗು

ಪುಟ:ಜಾಗರ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ

ಒಂದು ಕಥಾ ಸಂದರ್ಭಕ್ಕೆ ಹಿಂದಿನ ಹಿನ್ನೆಲೆಯ ಕಥೆ ಎಲ್ಲ ಪಾತ್ರಗಳಿಗೆ ಗೊತ್ತಿರು ವುದು ಸಾಧ್ಯವೆ? ಈ ವಿಚಾರವಾಗಿ, ಈಗಾಗಲೇ ಒಂದು ರೀತಿಯ ನಿಯಮ ಜಾರಿ ಯಲ್ಲಿದೆ ಎನ್ನಬಹುದು. ಅದೆಂದರೆ - ಇಂತಹ ಒಂದು ಕಥಾ ಸಂದರ್ಭ, ಘಟನೆ, ಒಂದು ಪಾತ್ರಕ್ಕೆ ಗೊತ್ತಿಲ್ಲ ಎಂಬುದೇ ಪ್ರಸಂಗದ ಸಂದರ್ಭಕ್ಕೆ ಅವಶ್ಯವಾದರೆ ಯಾ ಗೊತ್ತಿಲ್ಲದಿರುವುದು ಅಲ್ಲಿ ಸ್ಪಷ್ಟವಿದ್ದರೆ - ಆಗ ಗೊತ್ತಿಲ್ಲವೆಂದೇ ಪಾತ್ರ ನಿರ್ವಹಿಸ ಬೇಕು. ಉಳಿದ ಸಂದರ್ಭಗಳಲ್ಲಿ ಹಿಂದಿನ ಕತೆ, ಪ್ರತಿಯೊಂದು ಪಾತ್ರಕ್ಕೂ ಗೊತ್ತಿದೆ ಯೆಂದೇ ಭಾವಿಸಬೇಕು. ಉದಾ: 'ವಾಲಿಸುಗ್ರೀವರು ಆಕೃತಿಯಲ್ಲಿ ಒಂದೇ ರೀತಿ ಇದ್ದಾರೆ' ಎಂಬುದು ರಾಮನಿಗೆ ಗೊತ್ತಿಲ್ಲದಿರುವುದೇ ವಾಲಿವಧೆ ಪ್ರಸಂಗದ ಒಂದು ಮುಖ್ಯ ಅಂಶ, ಇಂಥಲ್ಲಿ ಗೊತ್ತಿರುವವನಂತೆ ರಾಮನ ಪಾತ್ರಧಾರಿ ಮಾತಾಡ ಬಾರದು.
ಅರ್ಥಗಾರಿಕೆಯ ಸಂದರ್ಭಕ್ಕೂ, ನಮ್ಮ ಎಲ್ಲ ಕಲೆಗಳಿಗೂ ಒಟ್ಟಾಗಿ ಸಂಬಂಧಿಸಿದ ಒಂದು ಗಂಭೀರ ಪ್ರಶ್ನೆಯನ್ನು ಶ್ರೀ ನಂಬಿಯಾರ್ ಎತ್ತಿದ್ದಾರೆ. ಅದು, ಅರ್ಥದಲ್ಲಿ ನಾವು ಪ್ರತಿಪಾದಿಸಬೇಕಾದ ಮೌಲ್ಯ ವ್ಯವಸ್ಥೆಯನ್ನು ಕುರಿತಾ ದದ್ದು. ಈ ಕಾಲಕ್ಕೆ ತಿರಸ್ಕರಣೀಯವಾದ, ಮಧ್ಯಕಾಲೀನವಾದ, ಊಳಿಗ ಮಾನ್ಯ ಪದ್ಧತಿ, ಜಾತಿ ಪದ್ಧತಿ - ಇವನ್ನೆಲ್ಲ ಸಮರ್ಥಿಸಬೇಕೆ, ಚಿತ್ರಿಸಬೇಕೆ ಎಂಬುದು. ಅವರಿಗೂ ಈ ವಿಷಯದಲ್ಲಿ ಗೊಂದಲ ಇದ್ದುದರಿಂದಲೇ ಅದನ್ನು ಸಾಕಷ್ಟು ವಿವೇಚನೆ ಮಾಡಿಲ್ಲ. ಪ್ರಶ್ನೆ ಪರಿಶೀಲನಾರ್ಹವಾದದ್ದು. ಆದರೆ, ಆಧುನಿಕ ಕಲೆಗಳಿಗೆ ಇರುವ ಸ್ವಾತಂತ್ರ್ಯ, ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಗೆ ಇಲ್ಲ. ಪ್ರಸಂಗಗಳು ಚಿತ್ರಿಸುವ 'ಧರ್ಮ' ನಮಗೆ ಎಲ್ಲ ವಿಚಾರಗಳಲ್ಲಿ ಅನು ಸರಣೀಯವೆನ್ನಲಾಗದು. 'ಧರ್ಮ'ದ ಹಲವು ಅಂಶಗಳು ಕಾಲಕಾಲಕ್ಕೆ ಪರಿವರ್ತಿ ತವಾಗುತ್ತದೆ. (ಧರ್ಮವು ಶಾಶ್ವತ, ಸನಾತನ, ತ್ರಿಕಾಲಾಬಾಧಿತ ಎಂದೆಲ್ಲ ಮುಗ್ಧ ವಾಗಿ ವಾದಿಸುವರಿವದ್ದಾರೆ, ಅದಿರಲಿ, ಆದರೆ ನಾವು ಆರಿಸಿಕೊಂಡಿರುವ ಕತೆಯಲ್ಲಿ ಜಾತಿ, ಮೌಲ್ಯ, ವ್ಯವಸ್ಥೆಯನ್ನು ನಾವು ಚಿತ್ರಿಸಲೇ ಬೇಕು. ಅದು 'ನಾಟ್ಯಧರ್ಮ' ಯಕ್ಷಗಾನವು ಸಾಂಪ್ರದಾಯಿಕ ಕಲೆಯಾದದ್ದರಿಂದ ಇದು ಅವಶ್ಯ. ಯಕ್ಷಗಾನವು ಆ ಕಾಲವನ್ನು ಚಿತ್ರಿಸುವ ಕಲೆ, ಅದಕ್ಕೊಂದು ರೂಪ ಮೌಲ್ಯ ಪ್ರಪಂಚ ಇದೆ. ಆದರೂ, ಪ್ರಶ್ನೆ ಬರುತ್ತದೆ. ಪ್ರಸಂಗಗಳ ಮೌಲ್ಯ ಮಿತಿಯನ ನಾವು ಒಪ್ಪ ಬೇಕೇ? ಮತ್ತು ಮಾತುಗಾರನಿಗೆ ವೈಯಕ್ತಿಕವಾದ ನಿಲುವು ಅರ್ಥಗಾರಿಕೆಯಲ್ಲಿ ಬಂದೇ ಬರುತ್ತದಲ್ಲವೇ ? (Involvement) ಪೌರಾಣಿಕ ಮೌಲ್ಯಗಳ ಕುರಿತು ನಾವು ಆವೇಶದಿಂದ ಅನಾವಶ್ಯಕ ಸಂದರ್ಭಗಳ ಕುರಿತು ಸಮರ್ಥಿಸಿ ಒತ್ತುವುದು ಬೇಡ ವಾದರೂ, ಅವನ್ನು ನಿರ್ಮಮ ಕಲಾದೃಷ್ಟಿಯಿಂದ ಚಿತ್ರಿಸುವುದು ಅವಶ್ಯ. 'ಪೌರಾಣಿಕ ಮೌಲ್ಯಗಳನ್ನು ಪ್ರಶ್ನಿಸುವ ಸಂಬಂಧವೂ ಕೆಲವು ಪಾತ್ರಗಳಲ್ಲಿ ನಮಗೆ ಸಿಗುತ್ತದೆ.