ವಿಷಯಕ್ಕೆ ಹೋಗು

ಪುಟ:ಜಾಗರ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಪ್ರದಾಯ ಮತ್ತು ಸುಧಾರಣೆ

ಸ್ಥೂಲವಾಗಿ ಯಕ್ಷಗಾನದ ಹಳೇ ಸಾಮಾಗ್ರಿಗಳನ್ನು ಹೋಲುವ, ನಿಜವಾಗಿ ಶೈಲಿಗೊಪ್ಪದ ಮಣಿಸರಕು, ಜರಿಡಾಬು, ಕೋರಿ' ಮುಡಿಗಳನ್ನು ಸ್ಥಳಾಂತರಿಸಿ, ಭುಜಮುಳ್ಳು, ಮಾರುಮಾಲೆ, ಸಿರಿಮುಡಿ, ಕಾಲ್ಮುಳ್ಳು, ಕಾಲ್ಚೆಂಡುಗಳು ಮತ್ತೆ ಕಾಣಿಸಬೇಕು - ಯಕ್ಷಗಾನದ ವೇಷ ನೃತ್ಯಕ್ಕೆ ಅನುಕೂಲಿಸಬೇಕು ಎಂಬ ಅರಿವು ಬರಬೇಕು. ಕಡೆಗಣಿಸಲ್ಪಟ್ಟ ಹಳದಿ ಸೋರಿ ವರ್ಣ ಮತ್ತೆ ತನ್ನ ಸ್ಥಾನವನ್ನು ಪಡೆಯ ಬೇಕು. ಹಗುರವಾದ ಮರ ಯಾ ಪ್ಲಾಸ್ಟಿಕ್ಕಿನಿಂದ ಸಾಮಾಗ್ರಿ ರಚನೆ ಆಗಬೇಕು.

ವಸ್ತ್ರಗಳ ಆಯ್ಕೆಯಂತೂ ದಿಕ್ಕಾಪಾಲಾಗಿದೆ. ಇಡೀ ರಂಗದ ಸೊಗಸನ್ನೆ ಕೆಡಿಸುವ ನೈಲಕ್ಸ್, ವೆಲ್ವೆಟ್‌ಗಳ ಬದಲು ಹಸುರು, ಕೆಂಪು, ಕಪ್ಪು, ಬಿಳಿ ಈ ಬಣ್ಣ ಗಳ ಹತ್ತಿ ಅರಿವೆಗಳ ಬಳಕೆ ಬರಬೇಕು. ಈಗ ಬಳಸುವ ಚಿಟ್ಟಗಳಲ್ಲಿ ಯಾವುದೇ ವರ್ಗಾಸಾಂಗತ್ಯ ನಿಯಮಗಳಾಗಲಿ ಇದ್ದಂತಿಲ್ಲ. ಕೇವಲ ಕಣ್ಣು ಕೋರೈಸುವ ಬಣ್ಣ ಗಳಿಗೇ ಪ್ರಾಧಾನ್ಯವಿದೆ. ವರ್ಗಾಗಳಿಗೆ ಲೆಕ್ಕಾಚಾರ, ನಿಯಮಗಳನ್ನು ಅನುಸರಿಸ ಬೇಕು.

ಯಕ್ಷಗಾನದ ಪೂರ್ವರಂಗವನ್ನು ಸಾಂಕೇತಿಕವಾಗಿ ಉಳಿಸಿಕೊಂಡು ಕೆಲವೊಂದು ದ್ವಂದ್ವ, ಮತ್ತು ಸಮೂಹ ನೃತ್ಯಗಳನ್ನು ಕಥಾನಕಕ್ಕೆ ಮೊದಲು ಪ್ರಯೋಗಿಸಬಹುದು. ಯಕ್ಷಗಾನ ರಂಗಸ್ಥಳಕ್ಕೆ ಬಂದಿರುವ ಬೃಹತ್‌ಗಾತ್ರದ ಆಯುಧಗಳು, ಸ್ಟೀಲಿನಬಿಲ್ಲುಗಳೂ, ಕಿಲೋಭಾರದ ಖಡ್ಗಗಳೂ, ಬೆಳ್ಳಿ ಗದೆಗಳೂ, ನೃತ್ಯಕ್ಕೆ ಬಾಧಕ, ಯಕ್ಷಗಾನದಲ್ಲಿ ಆಯುಧಗಳು ಕೇವಲ ಸಾಂಕೇತಿಕ ಮಾತ್ರ. ಅವು ಹಗುರವಾಗಿದ್ದು ನೃತ್ಯಕ್ಕೆ ತೊಂದರೆ ಆಗದಂತೆ ಇರಬೇಕು.

ರಂಗಸ್ಥಳವು ಸರಳವೂ ವ್ಯವಸ್ಥಿತವೂ ಆಗಿದ್ದು ಅದರ ಹಿಂಬದಿಗೆ ನಸು ಹಸುರು ಯಾ ನಸುಗೆಂಪಿನ ಬಟ್ಟೆಯನ್ನು ಬಳಸಬಹುದು. ಹಿಮ್ಮೇಳವು ರಂಗ ಭೂಮಿಯ ಭಾಗವಾಗಿ ಕಾಣುವಂತೆ ಹಿಮ್ಮೇಳದವರಿಗೆ ಸೂಕ್ತ ಸಮವಸ್ತ್ರ ಅವಶ್ಯ, ಪರದೆ ಹಿಡಿಯುವವರಿಗೂ ನಿಶ್ಚಿತ ಉಡುಪು ಇರಬೇಕು. ಟ್ಯೂಬುಲೈಟುಗಳು ರಂಗ ಭೂಮಿಗೆ ಅನುಚಿತ, ಪ್ರತಿಫಲನ ಶಕ್ತಿ ಇರುವ ಹಳದಿ ಬಿಳಿ ಬೆಳಕಿನ ಬಲ್ಬುಗಳು ಮಾತ್ರ ವೇಷಗಳನ್ನು ಮೆರೆಸಬಲ್ಲುವು. ಪ್ರಕಾಶವು ಮಧ್ಯಮ ಪ್ರಮಾಣದಲ್ಲಿದ್ದರೆ ಉಚಿತ.

ಯಕ್ಷಗಾನಕ್ಕೆ ಹೊಸ ಪ್ರಸಂಗಗಳ ರಚನೆ ಅವಶ್ಯ. ಆದರೆ ಪ್ರಸಂಗ ರಚಿಸುವವನಿಗೆ ಜವಾಬ್ದಾರಿ ಇದೆ. ಕತೆಯನ್ನು ಪದ್ಯಗಳಿಂದ ಬರೆದರೆ ಪ್ರಸಂಗ ವಾಗಲಿಲ್ಲ. ಕಥೆ, ವಸ್ತು ಯಕ್ಷಗಾನದ ರಮ್ಯಾದ್ಭುತ ರಂಗಕಲ್ಪನೆ, ನೃತ್ಯ, ವೇಷ, ಗಾನ, ಹಿಮ್ಮೇಳಗಳಿಗೆ ಹೊಂದಿಕೆ ಆಗಬೇಕು. ದೇವ, ದಾನವ, ಗಂಧ ರ್ವಾದಿ ಪಾತ್ರಗಳೂ, ನಾಟ್ಯ ಧರ್ಮವೂ ಅದರಲ್ಲಿ ಅಳವಟ್ಟಿರಬೇಕು.