ವಿಷಯಕ್ಕೆ ಹೋಗು

ಪುಟ:ಜಾಗರ.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

ಇತ್ತ ದಟ್ಟವಾದ; ವಿವರ ವಿವರಕ್ಕೆ ಕಣ್ಣು ಹಾಯಿಸಬಲ್ಲ ಎಚ್ಚರವಲ್ಲ. ಅತ್ತ ಎಲ್ಲದಕ್ಕು ಕರಿಮುಸುಕು ಎಳೆದಂತೆ ಗಾಢ ಸುಷುಪ್ತಿಯಲ್ಲ. ನಡುವಣ ಸ್ವಪ್ನ ರಮ್ಯ; ಅರ್ಧನಿಮೀಲಿತ ಮಾಯಾಲೋಕವೊಂದರ ಸೃಷ್ಟಿಗಾಗಿ ಕಲೆ ಕೆಲಸಮಾಡುತ್ತದೆ. ನಮ್ಮ ಸಂಗೀತ; ಚಿತ್ರ; ಶಿಲ್ಪ; ನಾಟ್ಯ - ಎಲ್ಲೆಲ್ಲಿಯೂ ಈ ಅರೆತೆರೆದ ಅಂದರೆ ಅರೆಮುಚ್ಚಿದ ವ್ಯಂಗ್ಯದ ಸೋಂಕಿಲ್ಲದೆ ಹೇಳುವೆ - ಈ ನಿಸ್ತರಂಗ ಧ್ಯಾನ ಸ್ಥಿತಿ.

ಇನ್ನೊಂದು ವಿಲಕ್ಷಣ ವಿದ್ಯಮಾನ ಇದೆ. ಕಲೆ ನಿರ್ಮಿಸುವ; ವಾಸ್ತವವನ್ನು ದಾಟಿದ ಭ್ರಮಾದ್ಭುತ ಪ್ರಪಂಚ, ಖಚಿತವಾದ; ಕರಾರುವಾಕ್ಕಾದ ಲೆಕ್ಕಚಾರದ “ಶಾಸ್ತ್ರ”ದ ಗಟ್ಟಿನೆಲದ ಮೇಲೆ ನಿಂತಿದೆ. ಚಾಚೂ ತಪ್ಪಬಾರದ ನಿರ್ದಿಷ್ಟ ತಾಳಗತಿ, ಆ ಗತಿಯಲ್ಲೇ ಹರಿವ ಲಯ, ಲಯಾನುಸಾರಿಯಾಗಿ ನರ್ತಕನ ಹೆಜ್ಜೆ; ಮೈ, ಪ್ರಮಾಣಬದ್ಧವಾದ ವೇಪರಚನೆ-ಇವೆಲ್ಲ ಶಾಸ್ತ್ರದ ಚೌಕಟ್ಟು ಎಷ್ಟು ಗಂಭೀರ ಎಂಬುದನ್ನು ತೋರಿಸುತ್ತದೆ. ಎಂಥ ಮನೋಧರ್ಮವೂ ಈ ಚೌಕಟ್ಟನ್ನು ಮುರಿಯುವುದಿಲ್ಲ. ಹಿಗ್ಗಿಸುತ್ತದೆ. ಮನೋಧರ್ಮ ಅರಳುತ್ತಿರುವಂತೆ ಚೌಕಟ್ಟಿನ ಎಲ್ಲೆಯನ್ನು ಹುಡುಕತೊಡಗಿದಾಗ, ಚೌಕಟ್ಟೇಕೊಂಚ ಮುನ್‌ಸರಿದು, ಮನೋಧರ್ಮಕ್ಕೆ ಎಡೆಮಾಡಿಕೊಟ್ಟು ಮತ್ತೆ ಅದರ ಸುತ್ತ ಚೌಕಟ್ಟಾಗೇ ನಿಂತಂತೆ ಕಾಣುತ್ತದೆ ನಮಗೆ. ನಮ್ಮ ಅಳವಿಗೆ ಇನ್ನೇನು ಸಿಕ್ಕಿತು ಎಂದು ತೋರುವ ದಿಗಂತದಂತೆ. ಈ ವಿದ್ಯಮಾನ ಭಾರತೀಯ ಕಲೆಗಳಿಗೆ ಹೇಗೆ, ಹಾಗೆ ಭಾರತೀಯ ಸಮಾಜಕ್ಕೂ ಸಲ್ಲುವುದೆಂದು ತೋರುತ್ತದೆ.

ಆತ್ಮ ಅಥವಾ ಮನಸ್ಸು ಮೈಯಲ್ಲಿ ಮನೆ ಮಾಡಿದಂತೆ, ಶಾಸ್ತ್ರದ ಮೊನಚಾದ ಕಟ್ಟುಪಾಡುಗಳ ನಡುವೆ ಕನಸಿನ ಲೋಕವೊಂದು ಮೈತೋರುವುದು ನಮ್ಮ ಯಕ್ಷಗಾನದ ಪ್ರೇಕ್ಷಕರಿಗೆ ನಿತ್ಯಾನುಭವ. ಆದ್ದರಿ೦ದಲೇ ಇಂಥ ಧ್ಯಾನ ಸದೃಶ ರಸಾನುಭವವನ್ನು ಕೊಡತಕ್ಕ ಕಲೆಗಳು ವಿಮರ್ಶಕನನೆಂಬ ಮೂರನೆಯ ಮನುಷ್ಯನನ್ನು ಸಹಿಸುವುದಿಲ್ಲ.

ಕಲೆ ಎಂದೇನು? ಸಮಗ್ರ ಭಾರತೀಯ ಸಾಹಿತ್ಯಕ್ಕೆ ಮನಸ್ಸು ನೆಟ್ಟಿರುವುದೇ “ಸರಸ್ವತ್ಯಾಸ್ತತ್ವಂ ಕವಿ ಸಹೃದಯಾಖ್ಯಂ ವಿಜಯತೇ” ಎಂಬ ಹೇಳಿಕೆಯಲ್ಲಿ ಕವಿ ಮತ್ತು ಸಹೃದಯ - ಇವರನ್ನು ಬಿಟ್ಟು ಮೂರನೆಯ ಬಣವಿಲ್ಲ. ಇದ್ದರೆ ಆ ಹೊರಗಿನವರಿಗೆ ಇಲ್ಲಿ ಪ್ರವೇಶ ಇಲ್ಲ.

ಅಂದರೆ ಏನು?