ಯಕ್ಷಗಾನ ರಂಗದ ವಿವಿಧ ಅಂಶಗಳಿಗೆ ಸಂಬಂಧಿಸಿ ಕಳೆದ ಕೆಲವು ವರ್ಷಗಳಲ್ಲಿ ನಾನು ಬರೆದ ಲೇಖನಗಳ ಪೈಕಿ ಆಯ್ದ ಕೆಲವು ಈ ಸಂಕಲನದ ರೂಪದಲ್ಲಿ ಪ್ರಕಟವಾಗುತ್ತಿವೆ. ಈ ಲೇಖನಗಳು ಬೇರೆ ಬೇರೆ ಪತ್ರಿಕೆ, ಸಂಚಿಕೆಗಳಲ್ಲಿ ಬೇರೆ ಬೇರೆ ಸಂದರ್ಭಗಳಿಗಾಗಿ ಬರೆದವುಗಳು. ಲೇಖನಗಳನ್ನು ಹೆಚ್ಚು ಕಡಿಮೆ ಮೂಲರೂಪದಲ್ಲೇ ಉಳಿಸಲಾಗಿದೆ, ಹಾಗಾಗಿ ಕೆಲವು ಪುನರಾವರ್ತನೆಗಳು ಅನಿವಾರ್ಯವಾಗಿ ಬಂದಿವೆ. ಕೆಲವು ಬರಹಗಳಲ್ಲಿ ಅಷ್ಟಿಷ್ಟು ಪರಿಷ್ಕರಣ ಮಾಡಿದ್ದೇನೆ.
ಈ ಸಂಕಲನವನ್ನು ಪ್ರಕಟಿಸಲು ಒಪ್ಪಿ, ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು ಸುಮನಸಾ ವಿಚಾರ ವೇದಿಕೆ, ಚೊಕ್ಕಾಡಿ-ಇದರ ಗೆಳೆಯರು, ತಮ್ಮ ಅಭ್ಯಾಸಪೂರ್ಣ ಮುನ್ನುಡಿಯಿಂದ ಈ ಕೃತಿಗೆ ಗೌರವವನ್ನು ತಂದಿತ್ತವರು ಧೀಮಂತ ವಿಮರ್ಶಕ, ವಿದ್ವಾಂಸ, ಮಿತ್ರ ಲಕ್ಷ್ಮೀಶ ತೋಳ್ಪಾಡಿ , 'ಜಾಗರ' ಎಂಬ ಅರ್ಥಪೂರ್ಣವಾದ ಹೆಸರನ್ನು ಸೂಚಿಸಿದವರೂ ಅವರೇ. ಇವರೆಲ್ಲರ ಪ್ರೀತಿ ವಿಶ್ವಾಸಗಳಿಗೆ ನಾನು ಆಭಾರಿ.
ಈ ಕೃತಿಯ ಪ್ರಕಟನೆಯಲ್ಲಿ ವಿಶೇಷ ಆಸಕ್ತಿ ವಹಿಸಿದ, ಪ್ರೋತ್ಸಾಹಿಸಿದ ಗೆಳೆಯ, ಹಿರಿಯ ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯನವರ ಪ್ರೋತ್ಸಾಹಕ್ಕೆ ನಾನು ತುಂಬ ಋಣಿ.
ಕೆಲವು ಲೇಖನಗಳ ಪರಿಷ್ಕರಣದಲ್ಲಿ ನೆರವಾದ ಹಿರಿಯ ಮಿತ್ರ ಭಾಗವತ ಅರ್ಥಧಾರಿ ಮಂದಾರ ಕೇಶವ ಭಟ್ಟರಿಗೆ, ಈ ಲೇಖನಗಳನ್ನು ನನ್ನಿಂದ ಬರೆಯಿಸಿ ಪ್ರಕಟಿಸಿದ ವಿವಿಧ ಪ್ರಕಟನೆಗಳ ಸಂಪಾದಕರಿಗೆ, ಯಕ್ಷಗಾನದ ಬಗೆಗೆ ನನ್ನೊಂದಿಗೆ ಚರ್ಚಿಸುತ್ತ ಆಸಕ್ತಿ, ವಿಮರ್ಶಾಪ್ರಜ್ಞೆಗಳಿಗೆ ಚಾಲನೆ ನೀಡಿದ ಹಲವು ಮಿತ್ರರಿಗೆ ನನ್ನ ನೆನಕೆ ಸಲ್ಲಬೇಕು.
ಅಂದವಾದ ಮುಖಚಿತ್ರವನ್ನು ರಚಿಸಿದ ಕಲಾವಿದ ಯಜ್ಞ ಅವರಿಗೂ, ಸೊಗಸಾಗಿ ಮುದ್ರಿಸಿದ ಕಿರಣ್ ಪ್ರಿಂಟರ್ ಬೆಳ್ಳಾರೆ ಇವರಿಗೂ ನನ್ನ ಕೃತಜ್ಞತೆಗಳು.