ವಿಷಯಕ್ಕೆ ಹೋಗು

ಪುಟ:ಜಾಗರ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬ / ಜಾಗರ
ಯೂ: ಭಾಗವತನೂ ಪಾಲಿಸಬೇಕು. ಅಭಿನಯವು ಪಾತ್ರಾನುಗುಣವಾಗಿರಬೇಕು. ಶ್ರೀಕೃಷ್ಣ - ಶ್ರೀರಾಮ - ಅರ್ಜುನ ಈ ಮೂವರು, ಒಂದೇ ಭಾವವನ್ನು ಅಭಿ ನಯಿಸುವಾಗ, ಮೂವರ ರೀತಿ ಬೇರೆ ಬೇರೆ ಇರಬೇಕಾಗುತ್ತದೆ. ಜರಾಸ೦ಧನ ವ್ಯಂಗ್ಯ, ಮೂದಲಿಕೆಗಳಲ್ಲಿ - ಕೃಷ್ಣನಂತಹ ಲಾಲಸ್ಯ ಬರಲಾಗದು. ಕಂಸನು, ವಸುದೇವನ ಮಾತಿಗೆ ಉತ್ತರವಾಗಿ 'ನಿಜವಲ್ಲ ಮಾತು ನಿಜವಲ್ಲ!” ಎಂಬಲ್ಲಿ ಬಗ್ಗಿ ನಕ್ಕು “ವಂಚನೆ”ಯನ್ನು ಅಭಿನಯಿಸಿದರೆ ಅದು ಆಭಾಸ. ಹಾಗೇ ಕೌರವನ ಪದ್ಯ “ನಿನ್ನಯ ಬಲುಹೇನು, ಮಾರುತಿಯನ್ನು ನಿರೀಕ್ಷಿಪೆನು' ಎಂಬಲ್ಲಿ ಬರಿಯ ಮೂದ ಲಿಕೆ ಕಂಡರೆ ಸಾಲದು, ಕೌರವನ ಅಹಂಕಾರ ದರ್ಪವೂ, ದಿಟ್ಟ ಸ್ವಭಾವವೂ ಮೂಡಿ ಬರಬೇಕು.
ಹಾಗೆಯೇ, ಮಾತುಗಾರಿಕೆ ಬೆಳೆದು ರಂಗದಲ್ಲಿ ಆಭಾಸ ಆಗಿರುವಂತೆ ಅತಿ ಅಭಿನಯದಿಂದಲೂ ಆದದ್ದುಂಟು. ಉದಾ : ಅರಿಗಳನ್ನು ಸದೆ ಬಡಿದು' ಎಂಬಲ್ಲಿ ಸದೆ ಬಡಿಯುವುದನ್ನು, 'ಸೆಣಸಿ ಕೃಷ್ಣಾರ್ಜುನರನು' ಎ೦ ಬಲ್ಲಿ ನ ಸೆಣಸು ಎಂಬುದನ್ನೊ ಭುಜಬಲದ ವಿಕ್ರಮದಿ' ಎಂಬಲ್ಲಿ ಭುಜಬಲವನ್ನೂ ನೋಡಿರಿ ಧರ್ಮಜ ಫಲುಗುಣಾದಿಗಳು, ರೂಢಿಯೊಳನಿಲಜ ಬಿದ್ದ' ಎಂಬಲ್ಲಿ ನೋಡಿರಿ- ಬಿದ್ದ ಇವನ್ನು ಹತ್ತಿಪ್ಪತ್ತು ಬಾರಿ ಅಭಿನಯಿಸುತ್ತಾರೆ. ಇದು ಅತಿ ಮತ್ತು ಅನುಚಿತ. ಅಭಿನಯವೆಂಬುದು ಅಭಿನಯದ ಕ್ಲಾಸು ಪಾಠವಾಗಬಾರದು. “ಹರಿಯು ಮೈ ಮುರಿದೆದ್ದು ಕಂಡಾಗ ನರನ ಪಿಂತಿರುಗಿ ಕೌರವನನೀಕ್ಷಿಸುತ” - (ಕೃಷ್ಣ ಸಂಧಾನ) ಇಂಥಲ್ಲಿ ಒಂದು ಸಲಕ್ಕಿಂತ ಹೆಚ್ಚು ಅಭಿನಯಿಸಿದರೆ ರಂಗತಂತ್ರಕ್ಕೆ ತೊಡಕು.
ಅಭಿನಯದಲ್ಲಿ, ಸೂಚಿಸಲಾದ ವಸ್ತುವನ್ನೊ ಘಟನೆಯನ್ನೂ ಅದು ಎಲ್ಲ ವಿವರಗಳೊಂದಿಗೆ ತೋರಿಸುವುದು ಇನ್ನೊಂದು ಆಭಾಸ ಉದಾ : “ಸದ್ದಿಲ್ಲದೆ ಮದ್ದರೆವೆನು” ಎಂಬಲ್ಲಿ ಮದ್ದು ಅರೆಯುವುದನ್ನು ವಿವರವಾಗಿ ತೋರಿಸುವುದಾಗಲಿ ಊಟದಲಿ ನಿಪುಣ ಎಂಬುದ ಬಲ್ಲೆ' ಎಂಬಲ್ಲಿ ಊಟವನ್ನು ಅನ್ನ, ಹುಳಿ, ಗೊಜ್ಜು ಸಾಂಬಾರಿನಲ್ಲಿ ಕಲಸಿ ತಿನ್ನುವ ಅಭಿನಯವಾಗಲಿ “ಓಡಿ ಬದುಕಿದ ಭಂಡ ನೀನೆಲ ಎಂಬಲ್ಲಿ ಹಾಗೆ ಹೀನೈಸುವ ಪಾತ್ರವೇ ಓಡಿತೋರಿಸುವುದಾಗಲಿ, ಬಾಲಿಶ ಕಲ್ಪನೆ. ಅಂತೆಯೇ, ನವಿಲನ್ನು ಕಂಡನು, ಎಂಬಲ್ಲಿ ಓಡುತಿಹ ಹರಿಣ ಎಂಬಲ್ಲಿ - ನವಿಲನ್ನೊ ಹರಿಣವನ್ನೊ - ಪಾತ್ರವು ತಾನೇ ಆಗಿ ಅಭಿನಯಿಸಿ ತೋರುವುದು. ನೃತ್ಯ ಕಾರ್ಯ ಕ್ರಮಕ್ಕೆ ಸರಿ ಇರಬಹುದು. ಕಥಾ ಪಾತ್ರವೊಂದರ ನೃತ್ಯಕ್ಕೆ ಸರಿಯಾಗದು. ಕತೆಯ ಪಾತ್ರವು ಮಾಡುವ ಅಭಿನಯವು ಪ್ರತಿಕೃತಿಯಲ್ಲ, ತಾನು ಅದನ್ನು ಸಾಂದರ್ಭಿಕವಾಗಿ ಅಭಿವ್ಯಕ್ತಿಸುವ ಪ್ರತಿಸೃಷ್ಟಿ ಆಗಬೇಕು. ರಾಮನು ಭರತ ನಲ್ಲಿ ಕಂದಪೋಗಯೋಧ್ಯಾಪುರಕ್ಕೆ, ಆನೆಕುದುರೆ ಮಂದಿ ಸೇನೆ ರಾಜ್ಯವಾಳ್ವುದಕೆ ಎಂಬಲ್ಲಿ ಆನೆ, ಕುದುರೆಗಳನ್ನು ಅಭಿನಯಿಸಿದರೆ ಹೇಗಾದೀತು? ಆಟ, ಊಟ, ನವಿಲು ಆನೆ ಇದನ್ನೆಲ್ಲ ಅಭಿನಯದಲ್ಲಿ ಸಂಕೇತಿಸಬೇಕಲ್ಲದೆ, ಅದೇ ಆಗಬೇಕಿಲ್ಲ, ಆಗಬಾರದು.