ಮುಳ್ಳುಗಳು
ಪೋಸ್ಟಾಫೀಸಿನ ಟಾವರ್ ಕ್ಲಾಕಿನಲ್ಲಿ ಏಳು ಗಂಟೆ ಹೊಡೆದ ಸದ್ದು, ಕೊನೆಗೂ ಬೆಳಗಾಯಿತು. ಅಯ್ಯೊ, ಎಷ್ಟು ಬೇಸರ! ಈ ಮಳೆಗಾಲದಲ್ಲಂತೂ ಉದ್ದುದ್ದವಾದ ರಾತ್ರಿಗಳನ್ನು ಕಳೆಯುವುದೆಂದರೆ ಪ್ರಾಣಸಂಕಟ. ನಿದ್ದೆಯಾದರೂ ಎಷ್ಟೆಂದು ಬಂದೀತು? ನಡುವೆ ಎಚ್ಚರಾದಾಗ ಬೇಸರವೋ ಬೇಸರ. ಕತ್ತಲು.... ಮಚ್ಛರದಾನಿಯಲ್ಲಿ, ಕೋಣೆಯಲ್ಲಿ, ಕೋಣೆಯ ಹೊರಗಡೆ- ಎಲ್ಲಾ ಕಡೆ ಕತ್ತಲೋ ಕತ್ತಲು. ಜಿಟಿ-ಜಿಟಿ ಮಳೆಯ ಸಪ್ಪಳ ಬೇರೆ. ನಿದ್ರೆಗಾಗಿ ಹಾಸಿಗೆಯಲ್ಲಿ ಹೊರಳಾಡಿದಷ್ಟೂ ಕಣ್ಣು ನಿಚ್ಚಳವಾಗುತ್ತವೆ. ಇಲ್ಲದ-ಸಲ್ಲದ ವಿಚಾರ ಬೇರೆ...ಹಾಳು ವಿಚಾರಗಳು.. ಹಾಳು ಹಳೇ ವಿಚಾರಗಳು...ಮತ್ತೆನ್ನ ಹಾಸಿಗೆ ಮುಳ್ಳಾಗಿ ಮೈಗೆ ಚುಚ್ಚುತ್ತದೆ.ಇನ್ನು ಎಂದಾದರು ಬೆಳಗಾದೀತೋ ಇಲ್ಲವೋ ಎನ್ನಿಸುವಷ್ಟರ ಮಟ್ಟಿಗೆ ಬೇಸರ ಬರುತ್ತದೆ.
ಅಂತೂ ಬೆಳಗಾಯಿತು. ಮಗ್ಗುಲುರೂಮಿಗೆ ಹೊಸದಾಗಿ ಪಿ.ಯು.ಸಿ.ಗೆ ಬಂದ ಹುಡುಗಿ ಎತ್ತರದ ಧ್ವನಿಯಲ್ಲಿ ಉದಯರಾಗ ಹಾಡುತ್ತಿದ್ದಾಳೆ. ಯಾವುದೋ ದರಿದ್ರ ಹಿಂದಿ ಫಿಲ್ಮಿನ ರೋಮ್ಯಂಟಿಕ್ ಗೀತೆ. ಮೂಲೆಯ ಬಾಥರೂಮಿನ ನಳದಿಂದ ಜೋರಾಗಿ ನೀರು ಸುರಿಯುತ್ತಿರುವ ಸದ್ದು ಕೇಳುತ್ತಿದೆ. ಕಸಗುಡಿಸುವ ಸದ್ದು, ಯಾರ ರೂಮಿನಲ್ಲೋ ಚಹಾ ಮಾಡಲು ಸ್ಟೋವ್ ಹೊತ್ತಿಸಿದ ಸದ್ದು. 'ಹಲೋ, ಗುಡ್ ಮಾರ್ನಿಂಗ್'- ಹಾಸ್ಟೆಲು ಎಚ್ಚತ್ತಿದೆಯೆಂದು ಹೇಳುತ್ತಿವೆ.
ಏಳಲಿಕ್ಕೇ ಬೇಸರ. ರಾತ್ರಿ ಮಲಗಿರಲಿಕ್ಕೆ ಬೇಸರ. ಮುಂಜಾನೆ ಏಳಲಿಕ್ಕೆ ಬೇಸರ.... ಎದ್ದಾದರೂ ಮಾಡುವುದೇನು ಇಷ್ಟು ಬೇಗ? ಅಭ್ಯಾಸದ ತಲೆನೋವಂತು ಇಲ್ಲ. ಅದೂ ಇದ್ದ ಕಾಲವೊಂದಿತ್ತು. ಆಗಲು ಬೇಸರವೇ. ಆದರೆ ಆಗ ಮಲಗಿರಲು ಬೇಸರವಿರಲಿಲ್ಲ. ತಲೆದಿಂಬಿಗೆ ತಲೆಯಿಟ್ಟೊಡನೆ ಸಾಕು. ಕಣ್ಣುಗಳು ಮುಚ್ಚಿಬಿಡುತ್ತಿದ್ದವು. ಕಣ್ದೆರೆದಾಗ ಅರ್ಧ ಹಗಲಾಗಿರುತ್ತಿತ್ತು. ಸುಖನಿದ್ರೆ, ಸವಿಗನಸು... ಆಗಿನ ಎಲ್ಲವೂ ಹಾಗೆಯೇ, ಸಿಹಿ-ಸಿಹಿ.
ಹ್ಞಾ, ಈಗೆದ್ದು ಲೆಕ್ಚರು ತಯಾರಿಸಬೇಕು? ಹೌದು. ಅದೇನು ಎಷ್ಟೊತ್ತಿನ ಕೆಲಸ? ತಯಾರು ಮಾಡದೆಯೇ ಹಾಗೇ ಹೋಗಿ ನಿಂತು