ಬಾಯಿಗೆ ಬಂದದ್ಧು ಒದರಿದರೂ ನಡೆಯುವುದು. ದೆವ್ವದ ಹಾಗೆ ಪಟ್ಟೆಪಟ್ಟೆಯ ಬಿಗಿ ಉಡುಪು ತೊಟ್ಟು ಬರುವ ಆ ಹುಡುಗರ ಲಕ್ಷ್ಯ ಅಭ್ಯಾಸದ ಕಡೆ ಇರುವುದು ಅಷ್ಟರಲ್ಲೇ ಇದೆ. ತಾನು ಈ ಥಂಡಿಯಲ್ಲಿ ಎದ್ದು ಲೆಕ್ಚರು ತಯಾರು ಮಾಡಿ ಕ್ಲಾಸಿಗೆ ಹೋಗಿ ನಿಂತು ಒದರಬೇಕು. ಆ ಮಕ್ಕಳು ಆರಾಮಾಗಿ ಕಾಲುಚಾಚಿ ಆಕಳಿಸುತ್ತ ಕೂತು ತನ್ನ ಮುಖ ನೋಡುತ್ತಿರಬೇಕು. ಹಲವು ವರ್ಷಗಳ ಅನುಭವ, ಲೆಕ್ಚರು ಅಂದರೆ ವಿದ್ಯಾರ್ಥಿಗಳಿಗೆ ಬೇಸರವಾಗುವುದು ಸಹಜವೆ. ಅವರ ಹದ್ದಿನ ಕಣ್ಣು ತನ್ನ ಮೇಲೆ - ಮುಖ, ಕೊರಳು, ಎದೆ, ಕಾಲು, ಚಪ್ಪಲಿಯ ವರೆಗೂ ಹರಿದಾಡುತ್ತದೆ ಆ ದೃಷ್ಟಿ. ತನಗಾಗ ಮೈಗೆಲ್ಲಾ ಚೂಪಾದ ಮುಳ್ಳು ಚುಚ್ಚುತ್ತಿರುವಂಥ ಅನುಭವ.
ಇದು ದಿನದ್ದೇ. ಹೊಸದೇನಲ್ಲ.ಮುಂಜಾನೆಯ ಹೊತ್ತು ವಿಚಾರಿಸುವಷ್ಟೇನೂ ಮಹತ್ವದ್ದಲ್ಲ.
"ಬಾಗಲಾ ತಗೀರೀ ಬಾಯೀ, ಕಸಾ ತಗೀತೇನು".
-ದರಿದ್ರ ಪ್ಯೂನ್ ನ ದನಿ. ಎದ್ದೊಡನೆ ಈ ಶನಿಯ ಮುಖದರ್ಶನವಾಗಬೇಕು. ಅದೂ ಕಸಬರಿಗೆಯೊಂದಿಗೆ. ರಜೆಗೆ ಮನೆಗೆ ಹೋದಾಗ ಮಾತಿಗೆ ಮಾತು ಬಂದು ಈ ವಿಶಯ ಕೇಳಿ ಅಕ್ಕ-ತವರಿಗೆ ಹಬ್ಬಕ್ಕೆಂದು ಮಕ್ಕಳೊಂದಿಗೆ ಬಂದವಳು-ನಗುತ್ತ ಅಂದಿದ್ದಳು. 'ಲಗೂ ಲಗ್ನಾ ಮಾಡಿಕೋಬಾರದಽ ಶಾಂತಿ ? ಆಮ್ಯಾಲ ನಿನ್ನ ಗಂಡನು ಬಂದು ಗದ್ದಾತುಟಿ ಹಿಡಿದು ರಮಿಸಿ ಎಬ್ಬಸ್ತಾನ ದಿನಾ ಮುಂಜಾನೆ.'
ಈ ವಯಸ್ಸಿಗೆ ಇಂಥ ಮಾತು ಕೇಳಿ ನಾಚಬೇಕೆ ? ಆದರೂ ಹೃದಯದಲ್ಲೆಲ್ಲೋ ಏನೋ ಮಿಸುಕಾಡಿದಂತೆ ಭಾಸ. ಹಾಗೆ ಎಬ್ಬಿಸಲು ಬರುವ ಆ 'ಗಂಡ' ಹೇಗಿರಬಹುದು ? ಮೊನ್ನೆ ಇಂಟರ್-ಯೂನಿವರ್ಸಿಟಿ ಕ್ರಿಕೆಟ್ ಮ್ಯಾಚಿನಲ್ಲಿ ಸೆಂಚುರಿ ಹೊಡೆದ ಆ ಕ್ಯಾಪ್ಟನ್ ಸುಧೀರ ಇದ್ದನಲ್ಲ, ಹಾಗೆ ಎತ್ತರ, ಸಾರ್ಟ್ ಇರಬಹುದೇ ? ಅಥವಾ ಆ 'ಅವನ' ಹಾಗೆ ? ಥೇಟ್ 'ಅವನ' ಹಾಗೆ ?
ಛೇ, ಮುಂಜಾನೆ ಏಳುತ್ತಲೂ 'ಅವನ' ನೆನಪು ಬಂದದ್ದು ನೆಟ್ಟಗಾಗಲಿಲ್ಲ. ಶಾಂತಿ ಜೋರಾಗಿ ಕಾಲು ಝಾಡಿಸಿ ಹೊದಿಕೆಯನ್ನು ಒದ್ದು ಎದ್ದು ಕುಳಿತಳು. ತಲೆಕೂದಲು ಸರಿಪಡಿಸುವ ನೆವದಲ್ಲಿ ತಲೆಯನ್ನು ಝಾಡಿಸಿ ಮಚ್ಛರದಾನಿಯನ್ನು ಸರಿಸಿ ಎದ್ದು ಬಾಗಿಲು ತೆರೆದಳು.
"ಏಟೋತ್ರೀ ಯವ್ವಾ ?" ಎಂದು ಹಲ್ಲು ಕಿರಿಯುತ್ತ ಒಳಬಂದ ಮಾದನ ಗೂಗೆಗಣ್ಣಿನ ದೃಷ್ಟಿಯ ದಿಕ್ಕನ್ನು ಗಮನಿಸಿದಾಗ ಅವಳಿಗೆ ತನ್ನ ಸೆರಗು ಅಸ್ತವ್ಯಸ್ತವಾಗಿದೆಯೆನ್ನುವುದರ ಅರಿವಾಯಿತು. ಅದೇ ಅವಳಿಗೆ ಚಿರಪರಿಚಿತವಾದ ಮುಳ್ಳಿನ ಮೊನೆ-ಹುಡುಗರ ಕಣ್ಣಲ್ಲೂ ಅದೇ, ಮಾದನ ಕಣ್ಣಲ್ಲೂ ಅದೇ,ಹಾಸ್ಟೆಲಿನ