ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦ ನಡೆದದ್ದೇ ದಾರಿ



                          ಹೀಗೊಂದು ಕತೆ

ಹತ್ತು ವರ್ಷಗಳ ಹಿಂದೆ ಇಂತಹುದೇ ಒಂದು ಸಂಜೆ: ಮಳೆಗಾಲದ ಪ್ರಾರಂಭದ ದಿನಗಳು. ಇಡಿಯ ದಿನ ಬಿಸಿಲಿನ ಬೇಗೆಯಲ್ಲಿ ಅಕ್ಷರಶಃ ಉರಿದು ಧಧಗಿಸುತ್ತಿದ್ದ ಮುಂಬಯಿ ನಗರ ಸಂಜೆಯ ತುಂತುರು ಮಳೆಯಿಂದ ತಂಪಾಗಿ ಆಪ್ಯಾಯಮಾನವಾಗಿತ್ತು. ಆಫೀಸು ಬಿಡುತ್ತಲೇ ಎಂದಿನಂತೆ ಎಲ್ಲರೊಂದಿಗೆ ಲೋಕಲ್ ಟ್ರೇನಿಗೋ ಬಸ್ಸಿಗೋ ಧಾವಂತಪಟ್ಟು ಓಡುತ್ತೋಡುತ್ತ ಹೊಗುವ ಬದಲು ಆಕೆ ಹನಿಮಳೆಯಲ್ಲಿ ನಿಧಾನವಾಗಿ ಬೇಕಂತಲೇ ನೆನೆಯುತ್ತ ತಂಪಾಗುತ್ತ ಕಾಲುದಾರಿಗುಂಟ ಸಾಗಿದ್ದಳು. ಮಲೆನಾಡಿನಿಂದ ಬಂದವಳು ಆಕೆ. ನೌಕರಿಗಾಗಿ ಮುಂಬಯಿ ಸೇರಿ ಹಲವಾರು ವರುಷಗಳೇ ಕಳೆದಿದ್ದರೂ ಇನ್ನೂ ಇಲ್ಲಿಯ ಬಿಸಿಲು ಆಕೆಗೆ ಸಹನವಾಗುತ್ತಿರಲಿಲ್ಲ. ಪ್ರತಿಸಲ ಮಳೆಗಾಲದ ದಾರಿ ಕಾಯ್ದು ಮಳೆ ಬಂದಾಗ ಯಥಾಶಕ್ತಿ ನೆನೆದು ಸಂತೋಷಪಡುತ್ತಿದ್ದಳು. ಆದರೂ ಮಳೆಗಾಲ ಮುಗಿದುಹೋದ ನಂತರ ಎನೋ ಒಮ್ದು ತರದ ಅತೃಪ್ತಿ ಹಾಗೆಯೇ ಉಳಿದುಬಿಡುತ್ತಿತ್ತು. ಛೆ, ಈ ಸಲ ಸಾಕಷ್ಟು ಮಳೆ ಆಗಲೇ ಇಲ್ಲ, ತೋಯಿಸಿಕೊಂಡದ್ದು ಸಮಾಧಾನವೇ ಇಲ್ಲ, ಅಂತ ಪ್ರತಿಸಲವೂ ಅನ್ನಿಸುತ್ತಿತ್ತು. ನಂತರ ಆಕೆ ಮತ್ತೆ ಮಳೆಗಾಲದ ದಾರಿ ಕಾಯುತ್ತ ಇಡೀ ವರ್ಷ ಕಳೆಯುತ್ತಿದ್ದಳು.

      "ಹಲೋ ಮ್ಯಾಡಮ್..."- ಗಕ್ಕನೆ ಹಿಂದಿನಿಂದ ಬಂದ ಸ್ಕೂಟರು ಆಕೆಯ ಪಕ್ಕದಲ್ಲೇ ನಿಂತಾಗ ಆಕೆ ತಿರುಗಿ ನೋಡಿದ್ದಳು.
      ಆತ. ಒಂದು ತಿಂಗಳ ಹಿಂದೆ ದಿಲ್ಲಿಯ ಹೆಡ್ ಆಫೀಸಿನಿಂದ ಟ್ರೇನಿಂಗಿಗಾಗಿ ಬಂದಿದ್ದ ಪ್ರೋಬೇಶನರಿ ಅಧಿಕಾರಿ; ಸದಾ ಗಂಭೀರನಾಗಿದ್ದು ತನ್ನನು ಸೆಳೆದಿದ್ದ ಮನುಷ್ಯ; ಶ್ರೀಯುತ-
      "ಹಲೋ" ಅಂದಿದ್ದಳು ಆಕೆ ಪ್ರತಿಯಾಗಿ ನಸುನಕ್ಕು. "ಮಳೆಯಲ್ಲಿ ನೆನೆಯುವುದು ನಿಮಗೆ ಇಷ್ಟವೆ ಮ್ಯಾಡಮ್?" ಇಂಗ್ಲೀಶಿನಲ್ಲಿ ಕೇಳಿದ್ದ ಆತ. ಅದೇ ಮೊದಲ ಸಲ ಮಾತನಾಡಿದ್ದರೂ ಎನೊಂದೂ ಪೀಟಿಕೆಯೂ ಇಲ್ಲದೆ ಬಹಳ ದಿನಗಳ ಪರಿಚಯವಿರುವಂತೆ ನೇರವಾಗಿ ಕೇಲಿದ್ದ ಆತ.

"ಹೌದು. ಬಹಳ ಇಷ್ಟ." ಆಕೆಯೂ ಸಂಕೋಚವಿಲ್ಲದೆ ಒಪ್ಪಿಕೊಂಡಿದ್ದಳು.