________________
೩೯೬ ನಡೆದದ್ದೇ ದಾರಿ ನೆನಪು ಬಂದಿತು. ಆಕೆ ನಿಧಾನವಾಗಿ ಎದ್ದು ಕಮಲಾ ಬಿಟ್ಟು ಹೋಗಿದ್ದ ಪ್ಯಾಕೆಟ್ ತೆರೆದು ಅವಳ ಡೈರಿ ಹೊರತೆಗೆದಳು. ಬೆಡ್‌ಲ್ಯಾಂಪ್ ಹಚ್ಚಿಕೊಂಡು ಮತ್ತೆ ಹಾಸಿಗೆಯ ಮೇಲುರುಳಿದಳು. ....ಸುರುಳಿಯಾಗಿ ಸುತ್ತಿಕೊಂಡು ಬಿಚ್ಚಿಕೊಂಡು ಬಂದವು ನೆನಪುಗಳು. ಬಹಳ ವರ್ಷಗಳ ಹಿಂದೆ ವಿಜಾಪುರದ ಗರ್ಲ್ಸ್ ಹೈಸ್ಕೂಲಿನಲ್ಲಿ ಕಮಲಾ ತನ್ನ ಸಹಪಾಠಿಯಾಗಿದ್ದದ್ದು, ಆಕೆಯ ಪಾಠದಲ್ಲಿನ ಜಾಣ್ಮ, ಅಭಿನಯದಲ್ಲಿನ ಆಸಕ್ತಿ, ಉಕ್ಕುವ ಉತ್ಸಾಹ, ಸಂಪ್ರದಾಯದ ವಿರುದ್ಧ ಬಂಡೇಳುವ ಪ್ರವೃತ್ತಿ, ಸ್ವಾತಂತ್ರ್ಯಪ್ರಿಯತೆ, ಜೀವನೋತ್ಸಾಹ ತುಂಬಿ ಚೆಲ್ಲುವ ಚಿಲುಮೆಯಾಗಿದ್ದ ಕಮಲಾ.... ರಾತ್ರಿ ಸದ್ದಿಲ್ಲದೇ ಸರಿಯುತ್ತಿತ್ತು.
ವಿಜಾಪುರದಲ್ಲಿ ಸರಕಾರಿ ಡಾಕ್ಟರಾಗಿದ್ದ ತಂದೆಯ ಮನೆಯಲ್ಲಿ ಅಚ್ಚೆಯ ಒಬ್ಬಳೇ ಮಗಳಾಗಿದ್ದ ಶಶಿಗೆ ಸ್ಕೂಲಿನಲ್ಲಿ ಕಮಲಾ ಬಹಳ ಆತ್ಮೀಯ ಗೆಳತಿ. ಸಮೀಪದ ಹಳ್ಳಿಯಾದ ಹುನಗುಂದದಿಂದ ಓದಲೆಂದೇ ವಿಜಾಪುರಕ್ಕೆ ಬಂದು ಅಲ್ಲಿನ ತನ್ನ ದೊಡ್ಡಣ್ಣನ ಮನೆಯಲ್ಲಿದ್ದಳು ಕಮಲಾ. ನೆರೆಯವರೂ, ಒಂದೇ ಕ್ಲಾಸಿನವರೂ ಆದ ಇಬ್ಬರೂ ಹುಡುಗಿಯರಲ್ಲಿ ಗೆಳೆತನ ಬಹುಬೇಗ ಬೆಳೆದು ಪ್ರಗಾಢವಾದ ಆತ್ಮೀಯತೆಯಲ್ಲಿ ಪರಿವರ್ತಿತವಾಗಿತ್ತು. ಆ ದಿನಗಳ ಬಗ್ಗೆ ವಿಚಾರ ಮಾಡಿದಾಗ ಶಶಿಗೆ ಈಗಲೂ ಒಂದು ವಿಷಯದ ಬಗ್ಗೆ ಆಶ್ಚರ್ಯವೆನಿಸುತ್ತದೆ - ತಮ್ಮಿಬ್ಬರ ಮೂಲಭೂತ ವ್ಯಕ್ತಿತ್ವಗಳಲ್ಲಿ, ಜೀವನ ದೃಷ್ಟಿಯಲ್ಲಿ ಅಪಾರ ಆಂತರವಿತ್ತು ; ತಮ್ಮಿಬ್ಬರ ವಿಚಾರಗಳಲ್ಲಿ, ಭಾವನೆಗಳಲ್ಲಿ ಸಹ ಅಂಥದೇ ಅಂತರ. ಹೀಗಿದ್ದೂ ತಾವಿಬ್ಬರೂ ಗೆಳತಿಯರಾದುದು ಹೇಗೆ ? ಈ ಎಲ್ಲ ಮೀರಿದ ಏನೋ ಆಂತರಿಕವಾದುದೊಂದು ತಮ್ಮಿಬ್ಬರನ್ನೂ ಇಷ್ಟು ವರ್ಷಗಳವರೆಗೆ ಹೀಗೆ ಬೆಸೆದಿತ್ತೋ ಏನೋ. - ಶಶಿಗೆ ಇನ್ನೂ ನೆನಪಿದೆ : ಒಂದು ಸಲ ಕ್ಲಾಸಿನಲ್ಲಿ 'ನನ್ನ ಜೀವನದ ಗುರಿ'ಯ ಬಗ್ಗೆ ನಿಬಂಧ ಬರೆಯಲು ಕನ್ನಡ ಟೀಚರು ಹೇಳಿದ್ದರು ನಂತರ ಕಮಲಾ ಬರೆದ ನಿಬಂಧವನ್ನು ಬಹಳ ಶ್ಲಾಘಿಸಿ ಎಲ್ಲರಿಗೂ ಓದಿ ತೋರಿಸಿದ್ದರು. ಕಮಲಾ ಅದರಲ್ಲಿ ಅಭಿನಯದ ಬಗ್ಗೆ ತನಗಿರುವ ಪ್ರೀತಿ-ಸೆಳೆತ ವರ್ಣಿಸಿ ತಾನೊಬ್ಬ ದೊಡ್ಡ ಅಭಿನೇತ್ರಿಯಾಗುವ ಕನಸು ಕಂಡಿದ್ದಳು. ಹನ್ನೆರಡು-ಹದಿಮೂರು ವರ್ಷಗಳ ಹುಡುಗಿಯ ಆ ಕಲಾಸಕ್ತಿ ಎಷ್ಟು ತೀವ್ರವಾಗಿತ್ತೆಂದು ಮುಂದೆ ಎಷ್ಟೋ ದಿನಗಳ ನಂತರ ಶಶಿಗೆ ತಿಳಿಯತೊಡಗಿತ್ತು. ಸ್ಕೂಲಿನ ನಾಟಕಗಳಲ್ಲಿ ಯಾವಾಗಲೂ ಅವಳದೇ