ಪುಟ:ನಡೆದದ್ದೇ ದಾರಿ.pdf/೫೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ನಷ್ಟು ಕತೆಗಳು/ವೀಣಾ ನಡೆದ ದಾರಿ....

೫೨೯

ಕರ್ನಾಟಕ ಲೇಖಕಿಯರ ಸಂಘದವರು ಕುಪ್ಪಳಿಯಲ್ಲಿ 'ಕವಿಶೈಲದಲ್ಲಿ
ಲೇಖಕಿಯರು' ಕಾರ್ಯಕ್ರಮ ನಡೆಸಿದಾಗ ಇನ್ನೊಮ್ಮೆ ಅವರು ಭೇಟಿಯಾದರು.
ಗೋಷ್ಠಿಯೊಂದರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು 'ಸ್ತ್ರೀವಾದ' ಎಂದರೆ
ಸ್ವೇಚ್ಛಾಚಾರವಲ್ಲ ಎಂದು ಒತ್ತಿ ಹೇಳಿದರು. ಆಗ ಎರಡು ದಿನ ಅವರ ಒಡನಾಟ.
ಬೆಂಗಳೂರಿನಲ್ಲಿ ೨೦೦೩ ರಲ್ಲಿ ನಡೆದ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನಕ್ಕೆ
ಅವರು ಅಧ್ಯಕ್ಷೆಯಾಗಿದ್ದರು. ತಮ್ಮ ಭಾಷಣದಲ್ಲಿ ಡಿ. ಆರ್. ನಾಗರಾಜ್ ಹೇಳಿದ
'ಗಾರ್ಗಿ ಪ್ರತಿಭೆ ಮತ್ತು ಕಾತ್ಯಾಯನಿ ಪ್ರತಿಭೆ' ಮಾದರಿಗಳ ಮಾತನ್ನು
ಉಲ್ಲೇಖಿಸಿದರು. ಲೇಖಕಿಯರ ಅಭಿವ್ಯಕ್ತಿಯನ್ನು ಕುರಿತು ಮಾತನಾಡುವಾಗ ನಾನು,
ಟಾಲ್‍ಸ್ಟಾಯ್ ಹೇಳಿದ "All happy families are alike : each unhappy
family is unhappy in its own way" ಎಂಬ ಮಾತನ್ನು ಉಲ್ಲೇಖಿಸಿ ಸ್ತ್ರೀಯರ
ಬದುಕೂ, ಪ್ರತಿಭೆಯೂ ಹೀಗೆಯೇ, ಅಸಂಖ್ಯ ಮಾದರಿಗಳಲ್ಲಿ ದೆ,ಡಿ.ಆರ್. ಹೇಳಿದಂತೆ
ಎರಡು ಮಾದರಿಗಳಲ್ಲಿ ಅಡಕಗೊಳಿಸಲು ಸಾಧ್ಯವಿಲ್ಲ.ಪುರುಷರ ಪ್ರತಿಭೆಯನ್ನು
ಹೀಗೆ ವಿಂಗಡಿಸಲು ಸಾಧ್ಯವೇ ಎಂದ ಮಾತು ಅವರಿಗೆ ಒಪ್ಪಿಗೆಯಾಗಿತ್ತು.
ನಾನು ಮತ್ತು ನನ್ನ ಪತಿ ಧಾರವಾಡದ ಯಾವುದೋ ಕಾರ್ಯಕ್ರಮಕ್ಕೆ
ಹೋದಾಗ ಅವರನ್ನು ಭೇಟಿಯಾದೆವು. ಹೀಗೆ ವೀಣಾ ಶಾಂತೇಶ್ವರ ಅವರ ಕೃತಿಗಳಂತೆ,
ವ್ಯಕ್ತಿಯಾಗಿಯೂ ಅವರ ಸರಳ ಸಜ್ಜನಿಕೆ ನನ್ನನ್ನು ಆಕರ್ಷಿಸಿದೆ.
ವೀಣಾ ಶಾಂತೇಶ್ವರ ಆಧುನಿಕ ಕನ್ನಡ ಕಥಾಸಾಹಿತ್ಯದಲ್ಲಿ ಪರಂಪರೆಯೊಂದನ್ನು
ತನ್ನ ನಂತರದ ಲೇಖಕಿಯರಿಗೆ ನಿರ್ಮಿಸಿಕೊಟ್ಟರು. ಕಳೆದ ನಲವತ್ತು ವರ್ಷಗಳಿಂದ
ಬರೆಯುತ್ತಿರುವ ವೀಣಾ ಶಾಂತೇಶ್ವರ ಕನ್ನಡದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ ಪಡೆದ ಮೊದಲ ಲೇಖಕಿಯೂ ಹೌದು. (ಆಜ್ಞೇಯ ಅವರ ಹಿಂದಿ ಕಾದಂಬರಿ
'ನದೀ ದ್ವೀಪಗಳು' ಅನುವಾದಕ್ಕಾಗಿ) .
೧೯೬೮ ರಲ್ಲಿ ಪ್ರಕಟವಾದ 'ಮುಳ್ಳುಗಳು' ಸಂಕಲನದ ಕತೆಗಳನ್ನು ಬರೆದಾಗ
ಅವರು 'ವೀಣಾ ಎಲಬುರ್ಗಿ'. 'ಮುಳ್ಳುಗಳು' ಪ್ರಕಟವಾಗಿ ಕೆಲವು ವರ್ಷಗಳ ನಂತರ
ವಿದ್ಯಾರ್ಥಿನಿಯಾಗಿದ್ದ ನಾನು ಆ ಸಂಕಲನದ 'ನೆನಪು ಬರೀ ನೆನಪು' ಕಥೆ ಓದಿ
ಅನುಭವಿಸಿದ ಆಪ್ತ ನೆನಪು ಇಂದಿಗೂ ಹಸಿರಾಗಿದೆ. ಕೌನ್ ಆಕಾರದ ಕೇವಲ ೭೬
ಪುಟಗಳ ಪುಟ್ಟ ಪುಸ್ತಕದ ರಕ್ಷಾ ಕವಚದ ಮೇಲೆ ಹಸಿರು ಕ್ಯಾಕ್ಟಸ್ ಮುಳ್ಳಿನ
ಚಿತ್ರವಿತ್ತು. 'ನೆನಪು ಬರೀ ನೆನಪು' ಬಾಲ್ಯ ಸ್ನೇಹಿತನನ್ನು ಹಲವು ವರ್ಷಗಳ ನಂತರ
ನೋಡಿದಾಗ ಮೂಡುವ ಎಳೆತನದ ನೆನಪುಗಳು, ಜೀವಂತಿಕೆಯ ನಿರೂಪಣೆ,
ಅನಿರೀಕ್ಷಿತ ತಿರುವಿನಿಂದ ಕೂಡಿದ ಕಥೆ, ತೀರ ಹೊಸತನದ ಕಥಾ ತಂತ್ರ - ಎಲ್ಲಾ