ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೩೨
ನಡೆದದ್ದೇ ದಾರಿ

ಕಲಾತ್ಮಕವಾಗಿ ಪರಿಣಾಮಕಾರಿಯಾಗಿ ತಮ್ಮ ಕೃತಿಗಳಲ್ಲಿ ಮೂಡಿಸಿದ್ದಾರೆ. ವೀಣಾ
ಅವರ ಕಥೆಗಳು ಸಮಾಜದ ತರತಮ ವ್ಯವಸ್ಥೆಯನ್ನು ನಿಷ್ಠುರವಾಗಿ ನೋಡುತ್ತವೆ.
ಇಲ್ಲಿ ಆರೋಗ್ಯಕರ ದೃಷ್ಟಿಕೋನವಿದೆಯೇ ಹೊರತು ಪುರುಷ ದ್ವೇಷವಿಲ್ಲ.
'ಹೊರಟು ಹೋದವನು' ಮತ್ತು 'ಮರೀಚಿಕೆ' ಕಥೆಗಳನ್ನು ನಿದರ್ಶನಕ್ಕೆ
ನೋಡಿದರೆ ವಸ್ತು ಮತ್ತು ಅಭಿವ್ಯಕ್ತಿ ತಂತ್ರಗಳ ದೃಷ್ಟಿಯಿಂದ ನವೀನವಾದ,
ಭಿನ್ನವಾದ ಕಥೆಗಳಿವು. 'ಹೊರಟು ಹೋದವನು' ಕಥೆಯಲ್ಲಿ ಲೋಂಡಾ ಸ್ಟೇಷನ್‌ನಲ್ಲಿ
ಮಿಠಾಯಿವಾಲಾನನ್ನು ನೋಡಿದಾಗ 'ಅಪರಿಚಿತನಾದ ಈ ಮಿಠಾಯಿವಾಲನ ಕಣ್ಣಲ್ಲಿ
ತನಗೆ ಹಿಂದೊಮ್ಮೆ ಪರಿಚಿತವಾಗಿದ್ದ ಬೆಳಕು. ತಾನು ಪ್ರಯತ್ನ ಪಟ್ಟು ಮರೆತಿದ್ದ,
ಅವ್ವ ಅಪ್ಪ ಜಗತ್ತು ಸೇರಿ ಜುಲುಮೆಯಿಂದ ಮರೆಸಿದ ಬೆಳಕು ....." ಕಾಣಿಸಿದಾಗ
ಅವಳು ವರ್ಷದಲ್ಲಿ ಒಂದೆರಡು ಸಲ ಆ ದಾರಿಯಲ್ಲಿ ಆ ಬೆಳಕನ್ನರಸಿ ಬರುತ್ತಾಳೆ.
'ಜಗತ್ತು ತನಗೆ ಬಹಳ ಅನ್ಯಾಯ ಮಾಡಿತ್ತು. ತನ್ನ ಬೆಳಕನ್ನು ಕಸಿದುಕೊಂಡಿತ್ತು.
ತನ್ನನ್ನು ಕೊನೆಯಿಲ್ಲದ ಕತ್ತಲ ಕೂಪದಲ್ಲಿ ನೂಕಿತ್ತು. ಅಂದಿನಿಂದ ಸುರುವಾಗಿತ್ತು
ತನ್ನಲ್ಲಿ ಈ ದಾಹ. ಈ ಸೇಡು....." ಹೀಗೆ ಯೋಚಿಸುವ ಕಥಾನಾಯಕಿ ಹನ್ನೆರಡು
ವರ್ಷಗಳ ನಂತರ ಆ ಮಿಠಾಯಿವಾಲಾ ಇನ್ನು ನೋಡಲು ಸಿಗುವುದಿಲ್ಲ ಎಂದು
ಖಚಿತವಾದಾಗ “ಬಹಳ ಕಾಲದಿಂದ ಬೆನ್ನ ಮೇಲಿದ್ದುದೊಂದು ಭಾರ ತಟ್ಟನೆ
ಕಳಚಿಬಿದ್ದು ಬೆನ್ನು ನೇರವಾದಾಗ ಒಂದು ಕ್ಷಣ ನಡೆಯಲಾಗದೆ ಮುಗ್ಗರಿಸಿದಂತಹ
ಅನುಭವ, ಶೈಲಿ ಕಲಿಸಿದ ಪ್ರೊಫೆಸರ ಮತ್ತೊಮ್ಮೆ ಸತ್ತು ಹೋದ ಅನುಭವ....."
(ಹೊರಟು ಹೋದವನು ಪುಟ ೬೪ ಕೊನೆಯ ದಾರಿ) ಕಥೆಯ ಅಂತರಂಗ ಕೊನೆಯಲ್ಲಿ
ತೆರೆದುಕೊಳ್ಳುತ್ತದೆ.
'ಮರೀಚಿಕೆ' ವೀಣಾ ಅವರ ಕಥನ ಶೈಲಿಯ ಇತ್ಯಾತ್ಮಕ ಅಂಶಗಳನ್ನೆಲ್ಲ
ಒಳಗೊಂಡ ಕಥೆ, ಏಕತಾನತೆಯ ಬದುಕಿನಿಂದ ಬೇಸತ್ತ ಗೃಹಿಣಿ 'ಮಿನಿ' - “ಒಮ್ಮೆ
ಹೋಗಬೇಕು ರೆಕ್ಕೆ ಬಿಚ್ಚಿಕೊಂಡು ಈ ಎಲ್ಲ ಗೋಡೆ ದಾಟಿ, ಆಚೆ ಏನಿದೆಯೆಂದು
ನೋಡಬೇಕು. ಒಂದು ಸಲವಾದರೂ ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹೇಗೆ
ಎಂದು ವಿಚಾರಿಸದೆ ಮನಸಿಗೆ ಬಂದದ್ದು ಮಾಡಬೇಕು. ಸಿಕ್ಕಿತು ತನಗೂ ಒಂದು
ಫೇರಿಲ್ಯಾಂಡ್, ಆದೀತು ಕುದುರೆಯೊಂದಿಗಿನ ರಾಜಕುಮಾರನ ಬೆಟ್ಟಿ..... ಏನಾದರೂ
ಇಲ್ಲಿಯ ತನಕ ಆಗದೇ ಇದ್ದದ್ದು ಆಗಬೇಕು..." ಈ ನಿರೀಕ್ಷೆಯಲ್ಲೇ ಬಸ್ಸಿನಲ್ಲಿ
'Waiting for Godot' ಓದುವ ಸಹಪ್ರಯಾಣಿಕ ದೊರೆತದ್ದು - “ನಾವು ಏನೇನೋ
ಆಗ್ಲಿ ಅಂತ ಕಾಯ್ತಿರತೀವಿ, ಆದರ ಎಲ್ಲಿ ಆಗತಾವ ಜೀವನದಾಗ..." ಎಂದ ಅವನಿಗೆ
ತನ್ನ ಸ್ನೇಹದ ಸೂಚನೆಯಾಗಿ ಆ ಪುಸ್ತಕದಲ್ಲೇ ವಿಳಾಸದ ಚೀಟಿಯನ್ನಿಟ್ಟು ಬಸ್ಸಿಳಿದು