ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಮಧುಸೂದನ
17

ಸ್ನೇಹಿತರನ್ನೆಲ್ಲಾ ಮನೆಗೆ ಸಂಘಕೂಟಕ್ಕಾಗಿ (Social gathering) ಕರೆದಿರುವರು.
ಮಧ್ಯಾಹ್ನ ನಾಲ್ಕು ಗಂಟೆಯ ಹೊತ್ತಿಗೆ ಆ ಮನೆಯು ಅನೇಕ ಐರೋಪ್ಯರ ಟೊಪ್ಪಿಗ
ಳನ್ನು ಧರಿಸಿರತಕ್ಕಂಥಾ ತರುಣರಿಂದ ತುಂಬಿಹೋಯಿತು. ಆ ತರುಣರು ಆ ಟೊಪ್ಪಿಗ
ಳನ್ನು ಧರಿಸಿದ್ದರೂ ಅವರ ಮುಖವು ವಿಕಾರವಾಗಿ ಕಪ್ಪುಬಣ್ಣದಿಂದಿತ್ತೇ ವಿನಹಾ
ಅವರು ಬೇರೆ ಐರೋಪ್ಯರಂತೆ ಕಂಡುಬರುತ್ತಿರಲಿಲ್ಲ. ಏನೂ ಅರಿಯದ ಹೊಸಬನೊ
ಬ್ಬನು ಆ ದಿನ ಅಲ್ಲಿಗೆ ಪ್ರವೇಶಮಾಡಿದ್ದರೆ ಅಲ್ಲಿ ನೆರದಿದ್ದ ಜನಗಳೆಲ್ಲರೂ ಕ್ರಿಸ್ತಮ
ತಾವಲಂಬಿಗಳಾದವರೆಂದು ಹೇಳುತ್ತಿದ್ದನು. ಏಕೆಂದರೆ ಎಲ್ಲರೂ ತಲೆಯ ಕೂದಲನ್ನು
ವಿಧವಿಧವಾಗಿ ಕತ್ತರಿಸಿಕೊಂಡು, ಟೊಪ್ಪಿಗಳನ್ನು ಹಾಕಿಕೊಂಡು, ಬಾಯಲ್ಲಿ ಚುಟ್ಟಾ
ಗಳನ್ನು ಕಚ್ಚಿಕೊಂಡು ಕಚ್ಚಿ ಕಚ್ಚಿ ಮಾತನಾಡುತಿದ್ದರು. ಒಬ್ಬನ ಹಣೆಯಲ್ಲಾದರೂ
ಮತಸಂಬಂಧವಾದ ಗುರುತುಗಳೇ ಇರಲಿಲ್ಲ. ಕ್ರಿಸ್ತ ಪಾದ್ರಿಗಳು ಹಣವನ್ನೂ, ತಮ್ಮ
ಸಾಮರ್ಥ್ಯವನ್ನೂ ಮತ್ತು ತಮ್ಮ ಜೀವಮಾನವನ್ನೆಲ್ಲಾ ಖರ್ಚು ಮಾಡಿದರೂ ಈಚಿಗೆ
ಕ್ರಿಸ್ತಮತವನ್ನವಲಂಬಿಸತಕ್ಕವರು ಎಲ್ಲೋ ಸಾವಿರಕ್ಕೊಬ್ಬನು. ಆದರೆ ಮೇಲೆ ಕಂಡ
ಹಿಂದುಗಳೂ ಅಲ್ಲದ, ಕ್ರಿಸ್ತರೂ ಅಲ್ಲದ ಜನಗಳ ಹಾಗೆ ಎಲ್ಲರೂ ಆಗುತ್ತಾ ಬಂದರೆ
ಪಾದ್ರಿಗಳು ಕಷ್ಟಪಡದೇನೇ ಸ್ವಲ್ಪ ಕಾಲದಲ್ಲೇ ಅನೇಕರು ಕ್ರಿಸ್ತಮತವನ್ನವಲಂಬಿಸು
ವುದನ್ನು ನೋಡಿ ಆಶ್ಚರ್ಯ ಪಡುವ ಕಾಲವುಬಂದೇ ಬರುವುದು. ಈ ವಿಷಯವು ಈಗ
ಎಲ್ಲೆಲ್ಲಿಯೂ ನಡೆಯುತ್ತಿರುವುದನ್ನು ಘಂಟಾಘೋಷವಾಗಿ ಹೇಳಬಹುದು. ಸಂಘ
ಸಂಸ್ಕರಣ ಧುರೀಣರು ಇತರ ವಿಷಯಗಳಿಗೆ ಗಮನ ಕೊಡುವುದನ್ನು ನಿಲ್ಲಿಸಿ ಅನ್ಯಾ
ಯವಾಗಿ ಹಾಳಾಗುತ್ತಿರುವ ತಮ್ಮ ತರುಣರನ್ನು ಸರಿಪಡಿಸುವುದಕ್ಕೆ ಪ್ರಯತ್ನ ಪಟ್ಟರೆ
ದೇಶಕ್ಕೆ ಎಷ್ಟು ದೊಡ್ಡ ಸಹಾಯಮಾಡಿದಂತಾಗುವುದು?
ಮನೆಯ ಬಾಗಿಲಿನಲ್ಲಿ ಇಬ್ಬರು ತರುಣರು ನಿಂತುಕೊಂಡು ಬಂದಂಥ ಅತಿಥಿಗ
ಳನ್ನೆಲ್ಲಾ ಒಳಕ್ಕೆ ಬಿಡುತ್ತಿದ್ದರು. ಪ್ರತಿಯೊಬ್ಬ ಅತಿಥಿಯೂ ತನ್ನ ಪಂಗಡದ ಗುಂಡಿ
ಯನ್ನು ತೋರಿಸುತ್ತಾ ಒಳಕ್ಕೆ ಹೋಗುತ್ತಿದ್ದನು. ಸುಮಾರು ಐದೂವರೆ ಗಂಟೆಯ
ಹೊತ್ತಿಗೆ ಬಾಗಿಲು ಹಾಕಲ್ಪಟ್ಟಿತು. ಈ ವಿಷಯಗಳೆಲ್ಲಾ ನಡೆದು ಹದಿನೈದು ವರ್ಷಗ
ಳಾದ್ದರಿಂದ ಆಗ ಪೊಲೀಸಿನವರ ಕಾಟವೇನೂ ಇರಲಿಲ್ಲ. ಆಗ ಯಾರು ಬೇಕಾದರೂ
ಯಾವ ಬಗೆಯ ಮಾಟಿಂಗುಗಳನ್ನಾದರೂ ಹೂಡಬಹುದಾಗಿತ್ತು. ಈಗಿನ ಕಾಲವಾಗಿ
ದ್ದರೆ ತಕ್ಷಣವೇ ದಂಡಪಾಣಿಯಾದ ಪೊಲೀಸಿನವನು ಬಂದು ಗುಂಪನ್ನು ಚದರಿಸಿ
ಮುಖ್ಯಸ್ಥರನ್ನು ಅನುಮಾನಾಸ್ಪದರೆಂದು ಸೆರೇ ಹಿಡಿಯುತ್ತಿದ್ದನು. ಮನೆಯೊಳಗೆಲ್ಲಾ
ಅನೇಕ ಮೇಜುಗಳೂ, ವೇತ್ರಾಸನಗಳೂ ಇಡಲ್ಪಟ್ಟಿದ್ದವು. ಅಲ್ಲಲ್ಲಿ ಗುಂಡಾದ

3