ಪುಟ:ನವೋದಯ.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

484

ಸೇತುವೆ

"ಈಗ ಇಂದಿರೆಗೆ ಎಷ್ಟು ವರ್ಷ ಅಂತ ತಿಳಕೊಂಡಿದೀರಿ? ಹದಿನಾರು ಕಳೀತು.
ಹದಿನೇಳು ದಾಟಿದ್ಮೇಲೆ ಹೈಸ್ಕೂಲಿಗೆ ಹೋಗೋದು ಚೆನ್ನಾಗಿರುತ್ತೆ!"
"ಅದೇನೂ ದೊಡ್ಡದಲ್ಲ. ಆ ವಯಸ್ಸಿನವರು ಬೇರೆಯವರೂ ಇದ್ದೇ ಇರ್‍ತಾರೆ."
ಅದು ಸಮಾಧಾನದ ಮಾತಾಗಿತ್ತು.
"ಹಿಂದಿಯಾದರೂ ಕಲಿಸೋಣವೆಂದರೆ ಈ ಊರಲ್ಲಿ ಹಿಂದಿ ಗೊತ್ತಿರೋರು
ಯಾರೂ ಇಲ್ಲ. ಆ ಪತ್ರಿಕೆಯವನಿಗೆ ಹೇಳಿ ಕನ್ನಡ ಪುಸ್ತಕಗಳಿನ್ನೇನೊ ಒಂದಿಷ್ಟು
ತರಿಸ್ತಾ ಇದೀವಿ."
ಅವರ ಮನಸಿನಲ್ಲೊ೦ದು ವಿಷಯ ಬಹಳ ದಿನಗಳಿಂದ ಮನೆ ಮಾಡಿತ್ತು.
ಜಯದೇವನ ಕೈಲಿ ಸುನಂದೆಗಿಷ್ಟು ಇಂಗ್ಲಿಷನ್ನಾದರೂ ಹೇಳಿಸುವುದು ಸಾಧ್ಯವಾಗಿ
ದ್ದರೆ? ಯೋಗ್ಯವಾಗಿದ್ದುದು ಯೋಚನೆ ಮಾತ್ರ. ಅದನ್ನು ಕೃತಿಗಿಳಿಸಲು ಅವಕಾಶ
ವಿರಲೇ ಇಲ್ಲ. ಹಿಂದೆ ಪಾಠ ಹೇಳಲು ಬರಲೊಪ್ಪದೇ ಇದ್ದ ಜಯದೇವ ಮದುವೆ
ಯಾದ ಅನಂತರವಾದರೂ ಒಪ್ಪಬಹುದೆಂಬುದು ಬರಿಯ ಆಸೆ ಮಾತ್ರ. ಆತ
ಇಂದಿರೆಗೆ ಪಾಠ ಹೇಳುವುದು, ತುರಿಸುತ್ತಲೇ ಇರುವ ನಾಲಿಗೆಗೆ ಎಂತಹ ಆಹಾರ!
ಆ ವಿಷಯ ಜಯದೇವನಿಗೆ ಹೊಳೆದಿರಲಿಲ್ಲವೆಂದೆ?ಖಾಸಗಿಯಾಗಿಯೇ ಇಂದಿರೆ
ಅಧ್ಯಯನ ಮಾಡಿದರಾಗುತ್ತಿತ್ತೆಂದು ಆತ ಎಷ್ಟೋ ಸಾರೆ ಯೋಚಿಸಿದ್ದ. ಆದರೆ
ಆಕೆಯ ತಾಯಿಯೊಡನೆ ಬಾಯಿ ತೆರೆದು ಪ್ರಸ್ತಾಪ ಮಾಡಿರಲಿಲ್ಲ. ಹಾಗೆ ಮಾಡಲು
ಭಯ ಆತನಿಗೆ. 'ನೀವೇ ಪಾಠ ಹೇಳ್ಕೊಡಿ ಮೇಸ್ಟ್ರೇ' ಎಂದರೆ? ತನ್ನ ಮನೆಗೇ ಆಕೆ
ದಿನವೂ ಬಂದು ಹೋಗುವುದಂತೂ ಆಗ ಹೋಗದ ಮಾತು.
ಅವರಿಬ್ಬರಲ್ಲದೆ ಇನ್ನೊಂದು ಜೀವವೂ ಈಗ ಆ ಬಗೆಗೆ ಯೋಚಿಸುತಿತ್ತು.
ಸುನಂದಾ ಹೇಳಿದಳು:
"ನನಗೆ ಹಿಂದಿ ಬರೋಲ್ಲ. ಇಂಗ್ಲಿಷ್ ಬೇಕಾದರೆ ಹೇಳ್ಕೊಡ್ತೀನಿ."
ಆ ಮಾತುಕೇಳಿ ಜಯದೇವ ಬೆರಗಾದ.
"ಹೇಳ್ಕೊಡ್ರಿ," ಎಂದಳು ಇಂದಿರಾ.
ಅದು ಸಾಧ್ಯ_ಎನಿಸಿತು ಇಂದಿರೆಯ ತಾಯಿಗೂ. ಆದರೆ ಮರುಕ್ಷಣದಲ್ಲೇ
ಸುನಂದೆಯ 'ಆರೋಗ್ಯ'ದ ನೆನಪಾಗಿ ಆಕೆ ಮುಗುಳು ನಕ್ಕರು.
ಸುನಂದೆಯತ್ತ ನೋಡಿ ಅವರೆಂದರು:
"ಹೇಳ್ಕೊಡೋದಕ್ಕೆ ನೀನೆಲ್ಲಿರ್‍ತೀಯಮ್ಮಾ? ಬೆಂಗಳೂರಿಗೆ ಹೋಗೊಲ್ವೇನು?
ಅಥವಾ ನಮ್ಮನೆಯನ್ನೇ ತವರ್ಮನೆ ಮಾಡ್ಕೊಂಡ್ಬಿಡ್ತಿಯೊ? ನಾನೇನೊ ಜವಾಬ್ದಾರಿ
ಹೊತ್ಕೊಳ್ಳೋದಕ್ಕೆ ಸಿದ್ಧವಾಗಿದೀನಿ!"
ಸುನಂದಾ ನಾಚಿದಳು:
"ಹೌದು. ಈ ತಿಂಗಳ ಕೊನೇಲಿ ನಾವು ಬೆಂಗಳೂರಿಗೆ ಹೊರಟ್ಹೋಗ್ತೀವಿ,"
ಎಂದ ಜಯದೇವ.