ಪುಟ:ನವೋದಯ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

487

ಬೇಕೆಂಬುದನ್ನು ನೀನೇ ನಿರ್ಧರಿಸಬಹುದು. ನಿನ್ನ ತಾಯಿಯವರ ಒಪ್ಪಿಗೆ
ಕೇಳುವುದೂ ಬಿಡುವುದೂ ನಿನಗೆ ಸೇರಿದ್ದು. ಹೃದಯ ಬಡಿದುಕೊಳ್ಳುತ್ತಾ
ಇದೆ. ಮಳೆಗಾಗಿ ಹಂಬಲಿಸುವ ಚಾತಕ ಪಕ್ಷಿಯ ಹಾಗೆ ಆತುರೆಗೊಂಡಿದ್ದೇನೆ.
ನನಗೆ ನೀನೇ ಆಸರೆ. ನನ್ನ ಭಾವೀ ಜೀವನವೆಲ್ಲ ನಿನ್ನನ್ನೇ ಅವಲಂಬಿಸಿದೆ.
ಹೆಚ್ಚೇನು ಹೇಳಲಿ? ಇದು ಮೊದಲಿನ ಕಾಗದ, ಕೊನೆಯದಲ್ಲ.
'ಉತ್ತರ ಕೊಡು. ಒಂದು ಸಿಹಿಯಾದ ಮುತ್ತು ಕೊಡು. ಆವರೆಗೂ
ನನಗೆ ನೆಮ್ಮದಿಯಿಲ್ಲ. ನಾಳೆ, ನಿನ್ನ ತಾಯಿಯಿಲ್ಲದ ಹೊತ್ತು ನೋಡಿ, ಹುಡುಗ
ಮನೆಯ ಮುಂದೆ ಸುಳಿಯುತ್ತಾನೆ. ಆಗ ನೀನು ಕೈಸನ್ನೆ ಮಾಡಿದರೆ ಒಳಗೆ
ಬಂದು ಉತ್ತರ ಪಡೆಯುತ್ತಾನೆ.

ಇತಿ ಪ್ರೇಮಭಿಕ್ಷು
ಚಾರ್.'

ಕಾಗದ ಮುಗಿದ ಬಳಿಕ ಮತ್ತೂ ಒಂದು ಸಾಲಿತ್ತು:
'ನೀನು ತುಂಬಿ: ನಾನು ಹೂ. ಹೂವಾಗುವಾ! ಜೇನಾಗುವಾ!'
ಜಯದೇವನ ಮುಖ ಕೆಂಪಡರಿ ಕೈಗಳು ಕಂಪಿಸಿದುವು. ಬಾಯಿ ತೆರೆದರೆ ಎಂಥ
ಮಾತು ಹೊರಬೀಳುವುದೋ ಎಂದು ಆತ ತುಟಿಗಳನ್ನು ಬಿಮ್ಮನೆ ಬಿಗಿದು ನಿಂತ.
ಕಾಗದ ಜಯದೇವನ ಕೈಲಿದ್ದಾಗಲೇ ಸಹಿಯ ಕಡೆಗೆ ತಿಮ್ಮಯ್ಯ ಕಣ್ಣೋಡಿ
ಸಿದ್ದರು. ಅವರ ಬಾಯಿಂದ ಬೈಗಳು ಹೊರಟುವು.
"ಹಲ್ಕಾ ನನ್ಮಗ! ನಾಚಿಕೆ ಕೆಟ್ಟೋನು!"
ಜಯದೇವ ಕಾಗದವನ್ನು ತಿಮ್ಮಯ್ಯನವರ ಕಡೆ ಚಾಚಿದ.
"ಏನು ಓದೋದು ಅದನ್ನ?" ಎಂದರಾದರೂ ತಿಮ್ಮಯ್ಯ, ಕಾಗದ ಪಡೆದು,
ತಾವೂ ಒಮ್ಮೆ ಅದರ ಮೇಲೆ ದೃಷ್ಟಿ ಹರಿಸಿದರು.
ಇಂದಿರೆಯ ತಾಯಿ ಹೇಳಿದರು:
"ಯಾವನೋ ಹೊಸಬ ಬಂದಿದಾನಂತಲ್ಲಾ. ಆತನೇ ಇರಬಹುದೂಂತ
ಇಂದಿರಾ ಅಂದ್ಲು."
"ರಾಮಾಚಾರೀನೇ, ಇನ್ಯಾರು?" ಎಂದರು ತಿಮ್ಮಯ್ಯ. ಅವರ ಮೂಗಿನ
ಹೊಳ್ಳೆಗಳು ಎಂದಿಗಿಂತ ದೊಡ್ಡವಾಗಿ ಕ೦ಡುವು.
"ಚಾರ್ ಅಂತೆ... ಇವನಿವನ...ಚಾರ್!" ಎಂದು ಅವರೇ ಮೂದಲಿಸಿದರು.
ಜಯದೇವನೆಂದ:
"ನೀವೇನೂ ಯೋಚಿಸ್ಬೇಡೀಮ್ಮ ಅವನಿಗೆ ಬುದ್ಥಿ ಕಲಿಸೋ ಜವಾಬ್ದಾರಿ
ನನಗಿರಲಿ. ನೀವಿದನ್ನ ಮನಸ್ಸಿಗೆ ಹಚ್ಕೋಬೇಡಿ."
ಆಕೆಯ ಕತ್ತಿನ ನರಗಳು ಬೀಗಿದುವು. ಎದೆಯ ಸಂಕಟವನ್ನು ಹತ್ತಿಕ್ಕಲಾರದೆ
ತೊಳಲಾಡುತ್ತ ಅವರೆಂದರು: