ಪುಟ:ನವೋದಯ.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸೇತುವೆ

517

ಈ ಅನುಭವ, ನನ್ನ ಪಾತ್ರಗಳು ಹೆಚ್ಚು ಸ್ಫುಟಗೊಳ್ಳಲು ಸಹಾಯಕವಾಯಿತು.
ಈ ಕಾದಂಬರಿಯಲ್ಲಿ ಒಂದೆಡೆ ಹೀಗಿದೆ:
ಜಯದೇವನೊ ಭ್ರಮೆ ಇಟ್ಟುಕೊಂಡೇ ಬಂದಿದ್ದ. ವಿದ್ಯಾ ಸರಸ್ವತಿಯ
ಮಂದಿರಕ್ಕೇ ಬಂದಿದ್ದ, ಅನನ್ಯ ಭಕ್ತಿಯಿಂದ. ಅದರೆ ಬಾಗಿಲು ಎಂದು ಭಾವಿಸಿ ಒಳ
ನುಗ್ಗಿದಲ್ಲೇ ಬಂಡೆ ಕಲ್ಲು ಮೆಲ್ಲನೆ ಮೂಗಿಗೆ ಸೋಂಕಿತ್ತು....

[ಪುಟ ೧೦೭]

ಅದು ಉಚ್ಚ ಆದರ್ಶಗಳನ್ನಿರಿಸಿಕೊಂಡು ಉಪಾಧ್ಯಾಯನಾಗಲು ಹೊರಟ
ವಿದ್ಯಾವಂತ ತರುಣನಿಗಾದ ಅನುಭವ.
ಆದರೆ ಆತ ನಿರಾಶಾವಾದಿಯಲ್ಲ. ಒಂದು ವರ್ಷದ ಉಪಾಧ್ಯಾಯ ಜೀವನದ
ಕೊನೆಯಲ್ಲಿ_
ವಾಸ್ತವತೆ ಅಣಕಿಸಿದ್ದರೂ ಜಯದೇವ ಸೋತಿರಲಿಲ್ಲ. ಜೀವನ, ಕಟು ಸತ್ಯ
ಗಳನ್ನು ತಿಳಿಸಿಕೊಟ್ಟು ಆತನ ದೃಷ್ಟಿಯನ್ನು ಸ್ವಚ್ಛಪಡಿಸಿತ್ತು.
ಹೃದಯದಲ್ಲಿ ಹುಮ್ಮಸ್ಸಿತ್ತು; ಬಲವಿತ್ತು ಬಾಹುಗಳಲ್ಲಿ.
ತನ್ನ ಬದುಕಿನ ಗುರಿ ದೂರವಿದ್ದಂತೆ_ ಬಲು ದೂರವಿದ್ದಂತೆ_ಆತನಿಗೆ ಕಂಡರೂ
"ಹಾದಿಯನ್ನು ನಾನು ಬಲ್ಲೆ; ಗುರಿ ಸೇರಬಲ್ಲೆ" ಎಂದು ಆತ್ಮ ವಿಶ್ವಾಸದಿಂದ ಒಳದನಿ
ಉಸುರುತಿತ್ತು.

[ಪುಟ ೧೬೩]

****

ಸಾಹಿತ್ಯ ಸೃಷ್ಟಿಯಲ್ಲಿ ಓದುಗರ ಪಾತ್ರ ಮಹತ್ತರವಾದುದೆಂದು ಸಾರುತ್ತ ಬಂದಿ
ರುವ ನಾನು, ಬರೆಹಗಾರನೊಡನೆ ನೇರವಾದ ಸಂಬಂಧವಿಡುತ್ತಿರುವ ಓದುಗರಿಗೆ ಇಲ್ಲಿ
ಅಭಿವಂದನೆ ಸಲ್ಲಿಸ ಬಯಸುವೆ. ಎಂದಿನಂತೆ ಈ ಕೃತಿಯ ವಿಷಯದಲ್ಲೂ ತಮ್ಮ ಸ್ಪಷ್ಟ
ಅಭಿಪ್ರಾಯಗಳನ್ನು ಓದುಗರು ನನಗೆ ಬರೆದು ತಿಳಿಸುವರೆಂಬ ನಂಬಿಕೆ ಇದೆ.
ಈ ಕಾದಂಬರಿಯ ರಚನೆಯ ಕಾರ್ಯದಲ್ಲಿ ನೆರವಾದ ಮೈಸೂರು ಸಂಸ್ಥಾನದ
ಪ್ರಸಿದ್ಧ ವಿದ್ಯಾ ಪರಿಣತರೊಬ್ಬರಿಗೂ ಪ್ರಕಟಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟು ಈ
ಕೃತಿಯನ್ನು ಪ್ರಕಟಿಸಿದ ಜನತಾ ಪಬ್ಲಿಕೇಷನ್ಸ್ ನ ಒಡೆಯರಾದ ಶ್ರೀ ಸಿ. ಗೋಪಾಲ
ರಾಯರಿಗೂ ಅಂದವಾದ ಮುಖಚಿತ್ರವನ್ನು ಬರೆದುಕೊಟ್ಟು ಕಲಾವಿದ ಶ್ರೀ ಎಂ.ಟಿ.ವಿ.
ಆಚಾರ್ಯರಿಗೂ ಮುದ್ರಣ ಕಾರ್ಯದಲ್ಲಿ ನೆರವಾದ ಶ್ರೀ ಎಸ್. ಕೆ. ನಾಡಿಗ್ ಅವರಿಗೂ
ಶೀಘ್ರ ಮುದ್ರಣದ ಭಾರ ಹೊತ್ತ ವಸಂತ ಪ್ರೆಸ್ ಒಡೆಯರಾದ ಶ್ರೀ ವೈ. ವಿ. ಲಕ್ಷ್ಮೀ
ನಾರಾಯಣರಾಯರಿಗೂ ನೆನಕೆಗಳು ಸಲ್ಲಬೇಕು.


ನಿರಂಜನ

10 ಮೇ, 1954

ವಿಲ್ಸನ್ ಗಾರ್ಡನ್

ಬೆಂಗಳೂರು-2