ಪುಟ:ನಾಸ್ತಿಕ ಕೊಟ್ಟ ದೇವರು.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಸ್ತಿಕ ಕೊಟ್ಟ ದೇವರು

ಮಾನವ ಬದುಕಲಾರ. ವಿಶ್ವಾಸವಿಡಲು ಒಬ್ಬ ದೇವರಿದ್ದರೆ, ಅವನನ್ನು ನಂಬಿಯಾದರೂ ಜನ ದಿನ ನೂಕುವರು. ಆಗ ತೋಟದಿಂದ ವಾಪಸು ಓಡಿಹೋಗುವ ಪ್ರಯತ್ನವನ್ನು ಯಾರೂ ಮಾಡಲಾರರು.

-ಹೀಗೆ ಧರ್ಮಗುರು ವಿವರಿಸಿದರು. ಸೀತಾಪತಿ ನಗುತ್ತಲೇ ಇದ್ದ.

ಕೊನೆಗೆ ಅವನೆಂದ :

"ನನ್ನ ಕತೆ ನಿಮಗೆ ಗೊತ್ತಿರಬಹುದು. ನನಗೂ ಜೀವನದಲ್ಲಿ ಒಂದು ಶ್ರದ್ಧೆಯಿದೆ. ಆದರೆ ಈವರೆಗೂ ದೇವರನ್ನು ನಿರ್ಮಿಸುವ ಸಾಹಸಕ್ಕೆ ನಾನು ಕೈ ಹಾಕಿಲ್ಲ ..."

ಧರ್ಮಗುರುಗಳು, ಬಟ್ಟೆ, ಬರೆ ಮಣ್ಣು ಬಣ್ಣ ಬೀಡಿ ಸಿಗರೇಟು ಗಳೆಲ್ಲ ಅಸ್ತವ್ಯಸ್ತವಾಗಿ ಹರಡಿದ್ದ ಆ ಕೊಠಡಿಯನ್ನು ನೋಡಿದರು. ಗೋಡೆಗಳ ಮೇಲಿದ್ದ ಚಿತ್ರಗಳನ್ನು ಕಂಡರು ... ಆಮೇಲೆ ಅಲ್ಲಿದ್ದ ವಿವಿಧ ವಿಗ್ರಹಗಳನ್ನು ದೃಷ್ಟಿಸಿದರು.

"ನಾಸ್ತಿಕ ... ನರಕ ಇವನಿಗೆ ಕಟ್ಟಿಟ್ಟಿದೆ ... ಧರ್ಮಲಂಡ" ಎಂದು ಮನಸ್ಸಿನಲ್ಲೇ ಧರ್ಮಗುರು ಟಿಪ್ಪಣಿ ಮಾಡಿಕೊಂಡರು. ಆದರೆ ಪ್ರಕಾಶವಾಗಿ, “ ಇಲ್ಲ ಸೀತಾಪತಿ, ನೀವು ಹಾಗೆನ್ನಬಾರದು ... ಆ ಬಡಪಾಯಿಗಳ ಮೇಲೆ ಕನಿಕರವಿಡಬೇಕು ... ಒಬ್ಬ ದೇವರನ್ನು ನಿರ್ಮಿಸಿ ಕೊಡಬೇಕು," ಎಂದು ವಿನಯದಿಂದ ನುಡಿದರು.

“ ಹಹ್ಹ! ಬಡಪಾಯಿಗಳ ಮೇಲೆ ಕನಿಕರ ! ಸರಿ ಹೇಳಿದಿರಿ!"

"ಹಾಗಲ್ಲ ಸೀತಾಪತಿ ..."

ಇದೊಂದು ದೊಡ್ಡ ತಮಾಷೆಯೆನಿಸಿತು ಸೀತಾಪತಿಗೆ. ಅಂತೂ ಬಲು ಪ್ರಯಾಸದಿಂದ ಧರ್ಮಗುರುವನ್ನು ಕಳಿಸಿಕೊಟ್ಟುದಾಯಿತು. ಆದರೆ ಆ ಸ್ವಾರಸ್ಯಕರ ಘಟನೆಯ ನೆನಪನ್ನು ಬೀಳ್ಕೊಡುವುದಾಗಲಿಲ್ಲ ... ಸೀತಾಪತಿ ನಗುತ್ತಲೇ ಇದ್ದ.

ರಾತ್ರಿ ಏನನ್ನೋ ಆತ ಓದಲು ಯತ್ನಿಸಿದ. ಬಲು ತಡವಾಗಿ ನಿದ್ದೆ ಬ೦ತು.

ಅದರೆ ಜೊರೋ ಎ೦ದು ಸುರಿದ ಮಲೆನಾಡಿನ ಮಳೆ ಉಷಃಕಾಲದಲ್ಲಿ ಅವನನ್ನು ಎಬ್ಬಿಸಿತು.

ಸೀತಾಪತಿ ಪೈಪ್ ಹಚ್ಚಿ ಬಲು ಹೊತ್ತು ಕುಳಿತ.