ಪುಟ:ನಾಸ್ತಿಕ ಕೊಟ್ಟ ದೇವರು.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ನಂ. ೨೦೮ ಮತ್ತು ನೀಲಿ ಬುಶ್ ಕೋಟು

೧೩೯

ಶರಟನ್ನು ಪ್ಯಾಂಟಿನೊಳಹಾಕಲು ಲಜ್ಜೆ ಅವನಿಗೆ. ಯಾವಾಗಲೂ ಹೊರಗೇ ಇಳಿಬಿಟ್ಟು ಶಾಲೆಗೆ ಹೋಗುತ್ತಿದ್ದ.
ಸಾಮಾನ್ಯವಾಗಿ, ಏನಾದರೂ ಬೇಕೆಂದು ಎಂದೂ ಕೇಳುವವನಲ್ಲ ಆತ. ತಿಂಗಳಿಗೊಮ್ಮೆ ಅಕ್ಕ ಮತ್ತು ತಮ್ಮ ಜತೆಯಾಗಿಯೇ ಸಿನಿಮಾ ನೋಡಲು ಹೋಗುತ್ತಿದ್ದರು. ಜತೆಯಾಗಿಯೇ ವಾರಕ್ಕೊಮ್ಮೆ ಒಂದಾಣೆಯ ಹುರಿಗಾಳು ಕೊಳ್ಳುತ್ತಿದ್ದರು.
ಹೀಗಿದ್ದರೂ, ನೀಲಿ ಬುಶ್ ಕೋಟಿನ ನೆನಪೊಂದು ಒಮ್ಮೆ ಅವರ ಜೀವನದೊಳಕ್ಕೆ ನುಸುಳಿಕೊಂಡಿತು. ಆ ದಿನ ಎದುರಿನ ಮಹಡಿಮನೆಯ ಚಂದ್ರಹಾಸ, "ಲೋ ನಾಣಿ, ಬರ್ತ್ತಿಯೇನಯ್ಯ ಕೊಂಚ ?" ಎಂದು ಕೂಗಿದ. ಹೊಲಿಸಿದ್ದ ಹೊಸ ಉಡುಪುಗಳ ರಾಶಿಯನ್ನು ತೋರಿಸಿ ಮೆಚ್ಚುಗೆಗಳಿಸಲೆಂದೇ ಆ ಆಹ್ವಾನವನ್ನು ಆತ ನೀಡಿದ್ದ.
ನಾಣಿ ಹಿಂತಿರುಗಿ ಬಂದಾಗ, ಅಷ್ಟೊಂದು ಉತ್ಸಾಹ ತೋರದೇ ಇದ್ದ ತಮ್ಮನ ಮುಖವನ್ನು ಗಮನಿಸಿ, ಶಾರದಾ ಕೇಳಿದಳು:
"ಯಾತಕ್ಕಂತೆ ಬರಹೇಳಿದ್ದು?"
"ಪ್ರದರ್ಶನ ನೋಡೋಕೆ..."
ಮೂರು ಜತೆ ಲಿನನ್ ಬುಶ್ ಕೋಟು-ಪ್ಯಾಂಟುಗಳು; ಎರಡು ಜತೆ ಉಣ್ಣೆ ಸೂಟುಗಳು; ಶರಟುಗಳು...
ಮುಂದೆ ಆ ದಿನವೆಲ್ಲ ಅಕ್ಕ ತಮ್ಮ ಪರಸ್ಪರ ಮಾತೇ ಆಡಲಿಲ್ಲ. ರಾತ್ರೆ ಮಲಗಿಕೊಂಡಾಗ, "ಈ ಯುಗಾದಿಗೆ ನಿನಗೊಂದು ಉಡುಗೊರೆ ಕೊಡಬೇಕೂಂತಿದೀನಿ, ನಾಣಿ," ಎಂದಳು ಶಾರದಾ.
"ಓಹ್ಹೋ!" ಎಂದು, ನಾಣಿ ನಕ್ಕ.
"ಯಾವ ಬಣ್ಣವೋ ನಿಂಗೆ ಇಷ್ಟ?"
"ನೀಲಿ, ತೆಳು ನೀಲಿ, ಆಕಾಶ ನೀಲಿ..." ಮತ್ತೆ ಅಣಕದ ನಗು.
ಇಲ್ಲ; ಯುಗಾದಿಗೆ ಆ ಉಡುಗೊರೆ ಬರಲೇ ಇಲ್ಲ. ಅದಕ್ಕೆ ಬೇಕಾಗಿದ್ದ ಒಂಬತ್ತೂವರೆ ರೂಪಾಯಿ ಜಮೆಯಾಗಬೇಕು ಎಲ್ಲಿಂದ?
ಉಗಾದಿ ಕಳೆದು ಹೋಯಿತು. ಉಡುಗೊರೆಯನ್ನೊಂದು ತಮಾಷೆಯಾಗಿಯೇ ಪರಿಗಣಿಸಿದ್ದ ನಾಣಿ, ಅಕ್ಕನನ್ನು ಅಣಕಿಸುತ್ತಲೇ ಇದ್ದ. ಅವಳ ಪಾಲಿಗೆ ಮಾತ್ರ ಇದು ಪರಿಹಾಸ್ಯದ ಮಾತಾಗಿರಲಿಲ್ಲ. ಎಂತಲೇ ಆಕೆಗೆ