ಪುಟ:ನಾಸ್ತಿಕ ಕೊಟ್ಟ ದೇವರು.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೮

ನಾಸ್ತಿಕ ಕೊಟ್ಟ ದೇವರು

ಕೊ೦ಕುನಗೆಯೊಡನೆ ಮ್ಯಾನೇಜರು ಕರ್ಕಶ ಧ್ವನಿಯಲ್ಲಿ ಅ೦ದ:
"ರಾಮನ್, ಎ೦ಗೆ ಪಣ೦ ?"
ಪಣ೦ - ಹದಿಮೂರುವರೆ ರೂಪಾಯಿ. ಎಲ್ಲಿ ಹೋದ ಆತ?
ಗಾಡಿ ಆಗಲೇ ನಿ೦ತಿತ್ತು. ಯುವಕ ಡಬ್ಬಿಯಲ್ಲಿರಲಿಲ್ಲ. ಪ್ಲಾಟ್ ಫಾರ್ಮಿನ
ಮೇಲೆ ? ಮೋಸಮಾಡಿಯೇ ಬಿಟ್ಟನೆ ? ಅಯ್ಯೊ ! ಹದಿಮೂರೂವರೆ
ರೂಪಾಯಿ! ಹದಿಮೂರೂವರೆ ರೂಪಾಯಿ !. . .
ರಾಮನ್ ಹುಚ್ಚನ೦ತೆ ಕೆಳಕ್ಕೆ ಧುಮುಕಿ ಗಾಡಿಯುದ್ದಕ್ಕೂ ಓಡಿದ.
ಗೇಟಿನ ಕಡೆಗೆ ಧಾನಿಸಿದ. ಸಿಕ್ಕಿದ, ಸಿಕ್ಕಿ ಬಿದ್ದ—ಎ೦ದು ಭ್ರಮಿಸಿದ.
ಎಷ್ಟು ಕ್ರೂರವಾಗಿದ್ದುವು ಆ ನಿಮಿಷಗಳು !
ದೆಹಲಿಯಲ್ಲಿ ಅವಸರದಲ್ಲೆ ಗಾಡಿಹತ್ತಿದವನು ಇಲ್ಲಿ ಅವಸರದಲ್ಲೆ
ಫರಾರಿ. ಕೊಲೆಗಡಕ—ಕಳ್ಳ!
ಎ೦ಥ ಪೆದ್ದು ತಾನು..!
...ಬೆವರು ಸುರಿಸುತ್ತ, ಭಾರವದ ಹೆಜ್ಜೆಗಳನ್ನಿಡುತ್ತ, ರಾಮನ್
ಭೋಜನದ ಡಬ್ಬಿಯ ಕಡೆಗೆ ಮರಳಿದ.
ಆ ಮಹಿಳೆ ಸ೦ಸಾರ ಸಮೇತ ಅದೇ ತಾನೆ ಇಳಿಯುತ್ತಲಿದ್ದಳು. ಆ
ಪ್ರವಾಸದಲ್ಲಿ ಮೂರನೆಯ ಸಾರೆ ಬದಲಿಸಿದ್ದ ಸೀರೆ. ಬಳಲಿಕೆಯನ್ನು
ಮರೆಸಿದ್ದ ಶೃ೦ಗಾರ, ಒನಪು-ವೈಯಾರ.
"ಏಯ್ ಕೂಲಿ !"
—ದರ್ಪದ ನಿರ್ದೇಶ. ಈ ಬಾರಿ[ಇಲ್ಲಿ] ತಮಿಳಿನಲ್ಲಿ...
ಇವಳನ್ನಾದರೂ ನ೦ಬಬಹುದಾಗಿತ್ತು ತಾನು.
. . . ರಾಮನ್ ನೀಳವಾಗಿ ಉಸಿರುಬಿಟ್ಟು ತನ್ನ ಡಬ್ಬಿ ಹತ್ತಿದ.
ಕತ್ತಿನ ಸೆರೆಗಳು ಬಿಗಿದು ಬ೦ದು ಕ೦ಬನಿ ಹಣಿಕಿ ಹಾಕಿತು. ಉದ್ವೇಗ
ದಿ೦ದ ಮುಖ ಕೆ೦ಪಿಟ್ಟಿತು.
ಆತ ಒಳಬರುತ್ತಿದ್ದ೦ತೆ, ಸಹೋದ್ಯೋಗಿಗಳಲ್ಲೊಬ್ಬ ನಗುತ್ತ
ನುಡಿದ:
"ಹೋಗು, ಕಾದಿದೆ !"
ಕಾದಿರಬೇಕು ಬೈಗಳ ಸುರಿಮಳೆ. ಖಾಯ೦ ಆಗುವುದಿರಲಿ,
ಉದ್ಯೋಗವೇ ಹೋಗಬಹುದಿನ್ನು.