ಪುಟ:ನಾಸ್ತಿಕ ಕೊಟ್ಟ ದೇವರು.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಡಿ ಲಕ್ಸ್

೧೫೭

ಕನ್ನಡಕದ ಯುವಕ ಇತರರಂತೆ, ಕಬಳಿಸುವ ನೋಟದಿಂದ ಆಕೆ
ಯನ್ನು ನೋಡಲಿಲ್ಲ. ಎದ್ದು, ತನ್ನ ಡಬ್ಬಿಗೆ ಹಿಂತಿರುಗಿದ.
'ಇವನು ಮೋಸ ಮಾಡಲಾರ,' ಎಂದುಕೊಂಡ ರಾಮನ್.
. . . ಝಾನ್ಸಿ ದಾಟಿದ ಬಳಿಕ, ಮೇಜುಗಳನ್ನು ಸರಿಸಿ ಅಲ್ಲೇ
ಶಯನ. ನಿದ್ದೆ ಬರುವುದಕ್ಕೆ ಮುನ್ನ ಯೋಚನೆ ಕಾಡಿತು:
ಬೆಳಗಿನ ಜಾವವೇ ಭೋಪಾಲದಲ್ಲೋ ಇತಾರ್ಸಿಯಲ್ಲೋ ಆತ
ಇಳಿದು ಹೋದರೆ?
ಬೆಳಗಾಯಿತು.
ಒರಗು ಆಸನಗಳಲ್ಲಿ ಕುಳಿತೇ ನಿದ್ದೆಹೋಗಿದ್ದ ಜನ ಎದ್ದು ಬಂದರು,-
ಕಾಫಿಗೆಂದು, ಚಹಾಕ್ಕೆಂದು.
ತನ್ನ ಮೇಜಿನ ತನ್ನ ಮೂಲೆಗೆ ಸಾಗಿದ, ಆ ಯುವಕ ಕೂಡಾ.
ಮಧ್ಯಾಹ್ನಕ್ಕೆ ನಾಗಪುರ. ಸಂಜೆಗೆ ಕಾಜೀಪೇಟೆ. ನಡುವಿರುಳಿಗೆ
ಬೆಜವಾಡಾ.
ಮೂರನೆಯ ಪ್ರಾತಃಕಾಲ. . .
ಹತ್ತು ಹೊಡೆಯುವ ಹೊತ್ತಿಗೆ ಮದರಾಸು ಸೇರಬೇಕು. ಗುಡ್ಡ
ಗಳನ್ನು ಕೊರೆದು, ನದಿಗಳನ್ನು ದಾಟಿ, ಕಣಿವೆಗಳನ್ನು ಬಳಸಿ, ಬಣ್ಣ
ಬಣ್ಣದ ಕನ್ನಡಿ ಹಾವಾಗಿ, ಎರಡು ಇರುಳು ಒಂದು ಹಗಲು ಕಳೆದ
ಬಳಿಕ, ಗಾಡಿಗೆ ವಿಶ್ರಾಂತಿ. ರಾಮನ್ ಗೂ ವಿಶ್ರಾಂತಿ, ಒಂದು ದಿನದ
ಮಟ್ಟಿಗೆ. ಆದರೆ ಈಗ ಬಿಲ್ ಸಿದ್ಧಗೊಳಿಸಬೇಕು. ಗೂಡೂರು ದಾಟಿತಲ್ಲ?
ಊಹೂಂ. ಡಬ್ಬಿಗೇ ಒಯ್ದುಕೊಡುವುದು ಚೆನ್ನಲ್ಲ. ಕೊನೆಯ
ಘಳಿಗೆಯವರೆಗೂ ಅವನು ಈ ಕಡೆಗೆ ಬರದೇ ಇದ್ದರೆ ಅತ್ತ ಹೋದ
ರಾಯಿತು.
ಜುಕು ಜುಕು ಜೂ, ಜುಕು ಜುಕು ಜೂ. . .
[ಇತರ ಗಾಡಿಗಳಿಗಿಂತ ಕಡಮೆ ಸಪ್ಪಳ.]
ಅಗೋ ಸಿಗ್ನಲ್! ಮದರಾಸಿನ ಕಲರವ. ರಣ ರಣ ಬಿಸಿಲು
ಆ ಪೂರ್ವಾಹ್ನದಲ್ಲೇ. . .ಹತ್ತಾರು ಗಾಡಿಗಳು ನಿಂತ ನಿಲ್ದಾಣದ ಗಲಭೆ.
ತಮಿಳೋ ತಮಿಳು. ಇಳಿಯುವವರ ಅವಸರ.
ಎಲ್ಲಿ, ಎಲ್ಲಿ ಆತ?