ಪುಟ:ನಾಸ್ತಿಕ ಕೊಟ್ಟ ದೇವರು.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಮಾಲ ಇಮಾಮ್ ಸಾಬಿ

೨೩

"ನೀವು ಮುದುಕ, ನಾನು ಮುದುಕಿ."
ಜೀವನದುದ್ದಕ್ಕೂ ಬಡತನದ ಬುತ್ತಿಯೇ ಆದರೂ, ನೇಗಿಲಗೆರೆ ಗಳಿಲ್ಲದ ಸುಕ್ಕುಗಳಿಲ್ಲದ ಸೊಂಪಾದ ಮುಖ, ಮೇಣದ ಬೊಂಬೆಯಂತಹ ದು೦ಡಗಿನ ಮೃದು ಶರೀರ. ಮುಗ್ಧ ಹಸುಳೆಯ ಛಾಯೆ ತುಟಿಗಲ್ಲಗಳಲ್ಲೆಲ್ಲ. ಮುಖದ ಮೇಲೆ ಬಿಳೆಯ ಬೆಳೆಯಿತ್ತು. ಸೋತು ಜೋತ ತೆಳ್ಳಗಿನ ಮೀಸೆ. ವಿರಳವಾಗಿ ಬೆಳೆದು ತಿಂಗಳಿಗೊಮ್ಮೆ ಕ್ಷೌರಿಕನ ಕತ್ತಿಗೆ ಬಲಿಯಾಗುತ್ತಿದ್ದ ಗಡ್ಡ. ಮಗುತನವನ್ನು ಮರೆಸಲು ಎಳೆಯನೊಬ್ಬ ಕೃತ್ರಿಮ ಗಡ್ಡ-ಮಿಾಸೆ ಗಳನ್ನೇ ಅ೦ಟಿಸಿಕೊಂಡ ಹಾಗಿತ್ತು, ಆ ನೋಟ. ಮಹಾ ಸಾತ್ವಿಕನಂತೆತೋರುತ್ತಲಿದ್ದ, ನಡು ಎತ್ತರದ ಈ ಮನುಷ್ಯ...
'ಕುಕ್' 'ಕುಕ್' ಎಂದು ಸದ್ದು ಕೇಳಿಸತೊಡಗಿತು, ದೂರ ದೊಂದು ಹಿಟ್ಟಿನ ಗಿರಣಿಯಿಂದ.
'ಮಿಲ್ ಶುರುವಾಯ್ತು.'
ಗಿರಣಿಯ ಕೂಗಿನಿಂದ ಕೆರಳಿತೆನ್ನುವಂತೆ ಕತ್ತೆಯೊಂದು ಅರಚುತ್ತ ದೂರ ಸಾಗಿತು ಹತ್ತಿರದಿ೦ದ.
ಇಮಾಮ್ ಸಾಬಿ ಕುಳಿತಿದ್ದ ಒರಗು ಬೆಂಚು ಹೊಸದು. ನಿಲ್ದಾಣದ ಹೊರ ಆವರಣದಲ್ಲಿ ಅಂತಹವು ಎರಡು ಇರಲೆಂದು ಇಲಾಖೆಯವರು ತರಿಸಿ ಹಾಕಿದ್ದರು. ಅವುಗಳ ಮೇಲೆ ಕುಳಿತವರ ಕಣ್ಣಿಗೆ, ಹೊಸದಾಗಿನೆಟ್ಟು ಬೆಳಸಿದ್ದ ಹೂವಿನ ಗಿಡಗಳು ಕಾಣುತ್ತಿದ್ದುವು. ದೀಪಸ್ತಂಭದ ಬುಡ ದಲ್ಲಿ ಮುಳ್ಳುತಂತಿಯ ವೃತ್ತದೊಳಗೆ ಬಂದಿಗಳಾಗಿ (ಸುರಕ್ಷಿತವಾಗಿ) ಬಣ್ಣ ಬಣ್ಣದ ಬಗೆಬಗೆಯ ಹೂಗಳಿದ್ದವು. ಮೊಗ್ಗುಗಳು; ಅರೆಬಿರಿದ, ಪೂರ್ಣ ವಾಗಿ ಅರಳಿ ಬಾಡಿ ಜೋಲುತ್ತಿದ್ದ ಹೂಗಳು.
ವಯಸ್ಸಿನೊಡನೆ ಮಂದವಾಗುತ್ತ ನಡದಿದ್ದ ಇಮಾಮ್ ಸಾಬಿಯ ದೃಷ್ಟಿ, ಹೂವಿನ ಸಸಿಗಳ ಮೇಲೆ ಸೋಮಾರಿಯಂತೆ ಎರಗಿತು. ಆ ಸೊಬಗಿನ ಆಸ್ವಾದನೆ ಅವನ ಸಾಮರ್ಥ್ಯಕ್ಕೆ ನಿಲುಕದ್ದು. ನೋಟ ಪುಷ್ಪರಾಶಿಯ ಮೇಲಿದ್ದರೂ ಆತ ಯೋಚಿಸುತ್ತಿದ್ದುದು ಬೇರೆಯೇ ಒಂದು :
ಕಿರಿಯ ಮಗನ ಹೆಂಡತಿ ತುಂಬಿದ ಗರ್ಭಿಣಿ. ಬೀಬಿ ನುಡಿದಿದ್ದಳು,–"ಇವತ್ತೋ ನಾಳೆಯೋ ಆಗಬಹು.” ಚೊಚ್ಚಲು.
ಚೊಚ್ಚಲು––