ಪುಟ:ನಾಸ್ತಿಕ ಕೊಟ್ಟ ದೇವರು.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ನಾಸ್ತಿಕ ಕೊಟ್ಟ ದೇವರು

“ನನಗೆ ಭಯವಾಗುತ್ತಪ್ಪ, ಹಣ ಈಗಲೇ ಕೊಟ್ಟಿರ್ತೀನಿ,” ಎಂದರು ವೀಣಾ.
"ಬ್ಯಾಡಿ, ಬಾಡಿ. ಆಮ್ಯಾಕೆ ಕೊಡೀರಂತೆ.”
ಹೊರಗಿನಿಂದ ಹ್ರೀಂ ಹಾಂ ಮಂತ್ರಘೋಷ ಬಿರುಸಾಯಿತು.

****

ಉಮಾಪತಿಯವರ ಮೊದಲ ಜಮಾಬಂದಿ ತೃಪ್ತಿಕರವಾಗಿ ನಡೆಯಿತಷ್ಟೇ ಅಲ್ಲ, ಒಂದೂವರೆ ದಿನ ಮುಂಚಿತವಾಗಿಯೇ ಮುಗಿಯಿತು.
ಬಿಡುವಿದ್ದಾಗಲೆಲ್ಲಾ ಮನೆಯ ಯೋಚನೆಯೇ ಕಾಡುತ್ತಿದ್ದ ಉಮಾಪತಿ, ಮುಂಚಿತವಾಗಿ ಹಿಂದಿರುಗುವುದು ಸರಿಯೋ ತಪ್ಪೋ ಎಂದು ವಿವೇಚಿಸತೊಡಗಿದರು.
ಆ ದಿನ ತೊಡಲೆಂದು ಕೋಟು ತೆಗೆದಿರಿಸಿದಾಗ, ಅದರ ಒಳಜೇಬಿ ನಲ್ಲಿದ್ದ ಚೀಟಿಯೊಂದು ಅವರ ಕೈಗೆ ತಾಕಿತು. ಅದನ್ನು ಹೊರತೆಗೆದರು.
'ವೀ' ಬರೆದುದು.
ಕೊನೆಯಲ್ಲಿತ್ತು :
". . . ನನಗೆ ಯಾಕೋ ಭಯ. ತಕ್ಷಣ ಬನ್ನಿ.”
ಉಮಾಪತಿ ಅಳುಕಿದರು . . .
ಆಹ !ಹಳೆಯ ಚೀಟಿ . 'ಆ' ದಿನದ್ದು.
ಗಾಬರಿಗೊಂಡೆನಲ್ಲಾ ಎಂದು ನಸು ನಕ್ಕರು. ನಾಜೂಕಾಗಿ ಒಮ್ಮೆ– ಎರಡು ಸಾರೆ-ಮಡಚಿ, ಚೀಟಿಯನ್ನು ಮೊದಲಿದ್ದಲ್ಲೇ ಇರಿಸಿದರು.
ಆದರೂ ಚಿಂತೆ ಅವರ ಮನಸ್ಸನ್ನು ಕವಿಯಿತು.
ತನ್ನ ಮುಖ್ಯ ಗುಮಾಸ್ತೆಯನ್ನು ಕರೆದರು.
"ಆಯ್ತಲ್ಲ, ಇನ್ನು ಯಾಕಿರೋಣ ಇಲ್ಲಿ?”
ಸಾಹೇಬರಿಗೆ ಅಮ್ಮಾವ್ರ ನೆನಪಾಗಿರಬೇಕೆಂದುಕೊಂಡ ಗುಮಾಸ್ತೆ ಅಂದ:
"ಹೊರಡ್ಬಹುದು, ಸರ್. ನಾಲ್ವಂತ್ತೆಟೇ ಮೈಲಿ. ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಬಂಗ್ಲೆ ಮುಟ್ಟಬಹುದು.”
"ಸರಿ. ಡ್ರೈವರನ್ನು ಕರೀರಿ.”

****