ಪುಟ:ನಾಸ್ತಿಕ ಕೊಟ್ಟ ದೇವರು.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸ್ವಸ್ತಿಪಾನ

೭೧

ಹೋದರು. ಒಳಬಾಯಿಯೆಲ್ಲ ಚುರ್ ಚುರ್ ಎಂದಂತೆ, ಅವಾಚ್ಯ ಪದಗಳು ನಿತ್ಯದಂತೆ ಉರುಳುತ್ತ ಬಂದುವು. ಅವರಿಗೆ ಮತ್ತೇರಿತು.
ಅಂದಿನಿಂದ ಇಂದಿನವರೆಗೂ ಅವರದು ಆ ಬಗೆಯ ಕುಡಿತ ಪ್ರತಿದಿನವೂ. ಒಂದು ನೀಳಲೋಟದ ತುಂಬ ಬಿಸಿ ನೀರು :
"ಎಂಥ ಬದುಕು !” ಎಂದು ಬದರಿ, ವ್ಯಾಪಾರೀ ಮಿತ್ರ ಮಾತು ಮುಗಿಸಿದಾಗ.
ಆ ರಾತ್ರಿ ಹೋಟೆಲಿಗೆ ಮರಳಿದ ಬದರಿಗೆ ಬೇಗನೆ ನಿದ್ದೆ ಹತ್ತಲಿಲ್ಲ. ನಿದ್ರೆ ಬಂದಾಗಲೂ ದಯಾನಂದರದೇ ಕನಸು. ಒಮ್ಮೆ “ ಅದೇ – ಎಷ್ಟು ಬೇಕು?” ಎಂಬ ಅವರ ಗುಡುಗು ಧ್ವನಿ ಕೇಳಿ, ಅವನು ಬೆಚ್ಚಿ ಎಚ್ಚೆತ್ತ. ಪುನಃ ನಿದ್ದೆ ಹತ್ತಿದಾಗ, ದಯಾನಂದರು ಕೈಯಲ್ಲಿ ಲೋಟ ಹಿಡಿದು ಶಬ್ದ ಬ್ರಹ್ಮನಾಗಿ ಪದ ಸೃಷ್ಟಿಯಲ್ಲಿ ತೊಡಗಿದ್ದ ಚಿತ್ರಮಾಲೆ ಅವನ ಕಣ್ಣಿಗೆ ಕಟ್ಟಿತು.

****

“ಅದ್ಭುತ !” ಎ೦ದ ಚಿಕ್ಕಣ್ಣಯ್ಯ.
ಇಬ್ಬರ ಬಾಟಲಿಗಳೂ ಮಗ್ಗು ಗಳೂ ಬರಿದಾಗಿದ್ದುವು.
ಬರವಣಿಗೆಯ ಮುಖ್ಯ ಅಂಶಗಳ ಕೆಳಗೆ ಗೆರೆ ಎಳೆಯುವವನಂತೆ ಬದರಿಯೆಂದ.
“ನಾಲ್ವತ್ತು ವರ್ಷ ಆ ಸಾಹುಕಾರ ಒಂದೇ ಸಮನೆ ಕುಡೀತಾ ಇದ್ದ. ಇದನ್ನ ಮರೀಬೇಡ.”
ನಮ್ಮದೂ ಇಪ್ಪತ್ತು ವರ್ಷ ಆಗ್ತಾ ಬಂತು ಅಂತೀನಿ.”
ಬದರಿ ತನ್ನ ಕೋಟಿನ ಕಿಸೆಯೊಳಗಿಂದ ಗೋಲ್ಡ್ ಪ್ಲೇಕ್ ಸಿಗರೇಟ್ ಪ್ಯಾಕೆಟನ್ನೂ ಲೈಟರನ್ನೂ ಹೊರತೆಗೆದ. ಪ್ಯಾಕೆಟ್ ಒಡೆದು ಒಂದನ್ನ ಹಚ್ಚಿ ತೆರೆದ ಪ್ಯಾಕಟ್ಟನ್ನೂ ಆರಿಸಿದ ಲೈಟರನ್ನೂ ಗೆಳೆಯನೆಡೆಗೆ ತಳ್ಳಿದ.
ಹೊಗೆ ಬಿಡುತ್ತ ಬದರಿಯೆಂದ :
“ಅಂದ್ಹಾಗೆ ಚಿಕ್ಕಣ್ಣಯ್ಯ, ನೀನ್ಹೊಂದು ಡೈನಿಂಗ್ ಟೇಬಲ್ ಯಾಕೆ ಮಾಡಿಸಬಾರದು?”
ಗೆಳೆಯ ಕಣ್ಣಂಚಿನಲ್ಲೇ ನಕ್ಕು ಅ೦ದ :