ಪುಟ:ನಾಸ್ತಿಕ ಕೊಟ್ಟ ದೇವರು.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ನಾಸ್ತಿಕ ಕೊಟ್ಟ ದೇವರು

ಮಾಡಿದ್ದರೆ ಸಾಕು, ಪರ್ಮಿಟ್ ದೊರೆಯುತ್ತಿತ್ತು. ಆದರೆ ದಯಾನಂದರು ಒಪ್ಪಲಿಲ್ಲ. ಅವರಂತಹ ಪ್ರಬಲ ಶ್ರೀಮಂತರಿಗೆ ಕಳ್ಳತನದಲ್ಲಿ ಮದ್ಯ ದೊರಕಿಸಿಕೊಳ್ಳುವುದೂ ಪ್ರಯಾಸದ ಮಾತಾಗಿರಲಿಲ್ಲ. ಪ್ರಾಯಶಃ ಅವರು ಹಾಗೆ ಮಾಡುವರೆಂದು ಎಲ್ಲರೂ ನಂಬಿದ್ದರು. ಆದರೆ ಆ ಗೊಡವೆಗೂ ದಯಾನಂದರು ಹೋಗಲಿಲ್ಲ. ಮಸೂದೆ ಶಾಸನವಾಗಿ ಅದು ಜಾರಿಗೊಳ್ಳುವ ದಿನ ಬಂತು. ದಯಾನಂದರ ಬದುಕು ಯಥಾಪ್ರಕಾರವಾಗಿ ಸಾಗಿತ್ತೇ ಹೊರತು, ಯಾವುದೇ ಬಗೆಯ ಕಳವಳವೂ ಅವರಲ್ಲಿ ತೋರಿ ಬರಲಿಲ್ಲ.
ಕೊನೆಯ ದಿನವೂ ಬಂತು. ತಮ್ಮಲಿ ಉಳಿದಿದ್ದ ಬಾಟ್ಲಿಯೊಂದನ್ನು ಬರಿದುಗೊಳಿಸಿದರಲ್ಲದೆ ನಿತ್ಯಕ್ಕಿಂತ ಒಂದು ತೊಟ್ಟನ್ನೂ ಅವರು ಹೆಚ್ಚು ಸೇವಿಸಲಿಲ್ಲ.
ಮಾರನೆಯ-ಮದ್ಯಪಾನ ನಿಷೇಧದ ಮೊದಲ-ದಿನ!
ಪೂರ್ವಾಹ್ನ ಎಂದಿನಂತೆ ವ್ಯವಹಾರಗಳು ನಡೆದುವು. ದಯಾನಂದರ ಮನಸ್ಸು ಒಂದಿಷ್ಟೂ ಅಸ್ತವ್ಯಸ್ತವಾಗಿರಲಿಲ್ಲ. ಅವರನ್ನು ಬಲ್ಲವರು ಮಾತ್ರ ಆತಂಕಕ್ಕೊಳಗಾಗಿದ್ದರು. ಸಾಹುಕಾರರಿಗೆ ಮತಿಭ್ರಮಣೆಯಾಗಬಹುದೆಂಬ ಭಯ ಅವರಿಗಿತ್ತು.
ಹನ್ನೆರಡು ದಾಟಿತು !
ದಯಾನಂದರು ಮನೆಗೆ ಹೋದರು.
"ಅಡುಗೆಯಾಯ್ತೆ?” ಎಂದು ಚಾಕರನನ್ನು ಕೇಳಿದರು.
"ಮಹಡಿಗೆ ಒಂದು ಸ್ಟವ್ ತಾ,” ಎಂದರು.
ಸ್ಟವ್ ಹಚ್ಚಿ, ಅದರ ಮೇಲೆ ನೀರನ್ನು ಕುದಿಯಲಿಟ್ಟು, ತಾವು ಕುರ್ಚಿಯ ಮೇಲೆ ಕುಳಿತರು.
ನೀರು ಮರಳತೊಡಗಿದಂತೆ ಅವರ ಮನಸ್ಸು ಹತೋಟಿ ತಪ್ಪಿತು. ಕೊತ ಕೊತ ಕುದಿದು ನೀರು ಸಿಡಿಯಲಾರಂಭಿಸಿದಂತೆ ಅವರ ಮೌನದ ಕಟ್ಟೆಯೊಡೆಯಿತು. ಸುಡುನೀರನ್ನು ಒಂದು ಲೋಟಕ್ಕೆ ಸುರುವಿ ಅವರು ತುಟಿಗಿಟ್ಟರು. ಒಂದು ಚೂರು ಕುಡಿದರು. ನಾಲಿಗೆ ಗಂಟಲು ಸುಟ್ಟು ಹೋದುವು. ಮತ್ತಿಷ್ಟು ಸ್ವಲ್ಪ ಸ್ವಲ್ಪವಾಗಿ ಇಷ್ಟಿಷ್ಟೇ-ಕುಡಿಯುತ್ತ