ಪುಟ:ನೋವು.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ನೋವು

ಪದ್ಮನಾಭ ಬಿ.ಎ.ಗೆ ಸೇರಿದ. ತಾನು ವೈದ್ಯಕೀಯದ ವಿದ್ಯಾರ್ಥಿಯಾದೆ. ಆಮೇಲೂ ಒಂದು ವರ್ಷ ಅವರ ಗೆಳೆತನಕ್ಕೆ ಚ್ಯುತಿ ಬರಲಿಲ್ಲ ಎನ್ನಬಹುದು. ಆದರೆ ಕಳೆದ ಬೇಸಗೆಯ ರಜದಲ್ಲಿ ಆ ಬಾಂಧವ್ಯ ಕಡಿದುಹೋಯಿತು. ಪಾಯಜಾಮದ ಅಂಚು ಒಂದು ಪೊದೆಯ ಮುಳ್ಳುಕಡ್ಡಿಯಲ್ಲಿ ಸಿಲುಕಿಕೊಂಡಿತು. ರಂಗಣ್ಣ ಬಗ್ಗಿ ಅದನ್ನು ಬಿಡಿಸಿದ. ಕಿರುಬೆರಳು ತೂರಿಹೋಗುವಷ್ಟು ಪಾಯಜಾಮ ಹರಿದಿತ್ತು. ರಂಗಣ್ಣ ಮುಂದುವರಿದ. ಹಣೆಯ ಮೇಲೆ ಬೆವರ ಹನಿಗಳು ಮುತ್ತುಗಟ್ಟಿದುವು. ಜುಬ್ಬದ ಮಗ್ಗುಲು ಜೇಬಿನಿಂದ ಕರವಸ್ತ್ರವನ್ನು ಹೊರತೆಗೆದು ಹಣೆಯನ್ನೂ ಮುಖವನ್ನೂ ಒರೆಸಿಕೊಂಡ. ಎಲ್ಲಿರಬಹುದು ಸುಭದ್ರೆ? ಯಾವ ಮರದ ಕೆಳಗೆ? ಯಾವ ಬಂಡೆಯ ಪೊದೆಯ ಮರೆಯಲ್ಲಿ? ಒಬ್ಬಳೇ ಇರುವಳೊ? ಅಥವಾ, ಆತ ಮೊದಲೇ ಬಂದು ಕಾಯುತ್ತಿರುವನೊ? ಜತೆಯಾಗಿ ಅವರನ್ನು ಕಂಡೆ; ಆಗ ಮಾಡಬೇಕಾದುದೇನು? ಅವರ ಸಂಬಂಧ ಏನಿದ್ದೀತು? ಬರಿಯ ಮಾತುಕತೆಯೋ ಅಥವಾ- ಇಂಥದೊಂದು ದುರ್ದಿನ ಒದಗಿಬಂದೀತೆಂದು ಕನಸು ಕೂಡಾ ಕಂಡಿರಲಿಲ್ಲವಲ್ಲ ತಾನು... ನಡುವನ್ನು ತುಸು ಬಾಗಿಸಿ ಮೇಲಕ್ಕೆ ನಡೆಯುತ್ತಿದ್ದ ರಂಗಣ್ಣ ಆರು ತಿಂಗಳ ಹಿಂದೆ ತಂಗಿಗೂ ತನಗೂ ನಡೆದ ಸಂಭಾಷಣೆಯನ್ನು ಸ್ಮರಿಸಿಕೊಂಡ: "ಸುಬ್ಬಿ, ನಿನ್ನ ಒಳ್ಳೇದಕ್ಕೆ ಹೇಳ್ತೀನಿ." ಹುಬ್ಬುಗಳನ್ನು ಮೇಲಕ್ಕೆ ಸರಿಸಿ, ತನ್ನನ್ನು ನೋಡಿ ಅವಳೆಂದಿದ್ದಳು: "ಏನು?" "ಪದ್ಮನ ಜತೆ ಚೆಲ್ಲಾಟ ಬಿಟ್ಟಬಿಡು." "ಅವನು ನಿನ್ನ ಗೆಣೆಯ. ಚೆಲ್ಲಾಟ ನೀನೇ ಆಡು. ನಾಯಾಕೆ ಆಡ್ಲಿ?” ಕೆಂಪಡರಿದ ಮುಖ, ಕಣ್ಣುಗಳಿಂದ ಕಿಡಿ. "ಅಪ್ಪನಿಗೆ ಗೊತ್ತಾದರೆ ನಿನ್ನ ಚಕ್ಕಳ ಸುಲೀತಾರೆ." "ಓಗೋ, ಓಗೋ, ಕಂಡಿದೀನಿ. ಮಾತಾಡ್ತಾನೆ! " "ಇನ್ಮುಂದೆ ಪದ್ಮನೂ ನೀನೂ ಇಬ್ಬರೇ ಕಿಲಿಕಿಲಿ ಮಾತ್ನಾಡಿದ್ರೆ ಹುಷಾರ್!" "ಕಿಲಿಕಿಲಿ ನೀನೇ ಮಾಡು ನರ್ಸಮ್ಮಗಳ ಜತೆಗೆ.” "ಮುಚ್ಚು ಬಾಯಿ!"-ಅದೊಂದೇ ಸಂವಾದದಿಂದ ಕರಗಿಹೋಗಬೇಕೆ ಅಣ್ಣ-ತಂಗಿಯರ ನಡುವಿನ ಮಮತೆ? ರಂಗಣ್ಣನಿಗೆ ಅನಿಸುತ್ತಿತ್ತು.: ತಾಯಿಯನ್ನು ಕಳೆದುಕೊಂಡುದರಿಂದ ಹೀಗಾಯಿತೇನೋ? ಹೆತ್ತವಳು ಇದ್ದಿದ್ದರೆ ಸುಭದ್ರೆ ಖಂಡಿತ ಹದ್ದುಮಿಾರಿ ಹೋಗುತ್ತಿರಲಿಲ್ಲ. ತನಗೂ ತಂಗಿಗೂ ಐದು ವರ್ಷಗಳ ಅಂತರ. ಹತ್ತು ದಿನಗಳ ಹಸುಳೆಯನ್ನು ಬಿಟ್ಟು ಬಾಣಂತಿ ದೆಸೆಯಲ್ಲಿ ತಾಯಿ ಕಾಲವಾಗಿದ್ದಳು. ತಮ್ಮ ಸೋದರತ್ತೆ ತಾಯಿಯ ಸ್ಥಾನವನ್ನು ತುಂಬಿದುದರಿಂದ ಸುಭದ್ರೆ ಉಳಿದುಕೊಂಡಳು. ... ಒಂದು ಮರದ ಕೆಳಗೆ ನಿಂತು ತುಸು ದಣಿವಾರಿಸಿಕೊಂಡ ರಂಗಣ್ಣ. ಅಲ್ಲಿಂದ