ಪುಟ:ನೋವು.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ನೋವು

     ದೃಷ್ಟಿ ಹರಿಯುವ ತನಕವೂ ದಿಬ್ಬದ ಉದ್ದಗಲಕ್ಕೆ ಆತ ನೋಡಿದ. ಅವರಿಬ್ಬರು ತನಗೆ ಕಾಣಿಸುವ ಬದಲು ತಾನೇ ಅವರ ಕಣ್ಣಿಗೆ ಬಿದ್ದರೆ? ಸದ್ಯಃ ಅವರ ಸುಳಿವಿರಲಿಲ್ಲ. ದೂರದಲ್ಲಿ ಒಂದೆರಡು ಮರಗಳ ಕೆಳಗೆ ದನಕರುಗಳಿದ್ದುವು. ಒಣ ಹುಲ್ಲನ್ನು ತಿಂದುಬಂದು ನೆರಳಲ್ಲಿ ಮೆಲುಕು ಹಾಕುತ್ತಿದ್ದುವು. ಇಬ್ಬರು ಮೂವರು ದನಕಾಯುವ ಹುಡುಗರೂ ಇದ್ದರು.
  ರಂಗಣ್ಣ ತೆನ್ನೆದುರು ನೇರವಾಗಿ ಹಳ್ಳಿಯ ಕಡೆ ನೋಡಿದ. ಸೋಮಾರಿಯಂತೆ ಹರಡಿಕೊಂಡಿದ್ದ ಗ್ರಾಮ. ಅಲ್ಲಲ್ಲಿ ಮರಗಳು, ಮನೆಗಳು. ಅವುಗಳ ಮೇಲಿಂದ ಬಿಸಿಲು ಥಕಥಕ ಕುಣೆಯುತ್ತಿತ್ತು.
     ತುಸು ದೂರದಲ್ಲಿ ಅಂಕುಡೊಂಕಾದೊಂದು ಬೆಳ್ಳಿಯ ಗೆರೆ. ಅದು ಕ್ಷೀರ ನದಿ. ಯಾರು ಅದನ್ನು ಹಾಲು ಹೊಳೆ ಎಂದು ಕರೆದರೊ? ಯಾವ ಋಷಿಯೊ, ಯಾವ ಮುನಿಯೊ ? ಎಷ್ಟೊಂದು ಕಾಡುಮೇಡುಗಳನ್ನು ಹಾದುಬರುತ್ತಿದೆಯೊ ಈ ಕ್ಷೀರ? ಬೇಸಗೆಯಲ್ಲೂ ಹಳ್ಳಿಗೆ ಸಾಲುವಷ್ಟು ನೀರಿರುತ್ತಿತ್ತು. ಈ ನದಿ ಇರುವುದರಿಂದಲ್ಲವೆ ಕಣಿವೇಹಳ್ಳಿ ಶ್ರೀಮಂತವಾಗಿರುವುದು? ಅದರ ನೀರನ್ನು ಕುಡಿದಲ್ಲವೆ ಹಳ್ಳಿಯ ಜನ ಬದುಕುತ್ತಿರುವುದು ?
     ಕ್ಷೀರ ನದಿಯ ನೆನಪಾದಾಗಲೆಲ್ಲ ರಂಗಣ್ಣನಿಗೆ ಆಶ್ಚರ್ಯವೆನಿಸುತ್ತಿತ್ತು.  ಎಷ್ಟೊಂದು ಕ್ರಿಮಿಕೀಟಗಳಿರಬೇಡ ಆ ನದಿಯ ನೀರಿನಲ್ಲಿ? ಆದರೂ ಆ ನೀರನ್ನು ಕುಡಿದ ಜನರ ಆರೋಗ್ಯ ಕೆಡುವುದಿಲ್ಲವಲ್ಲ ! ಗಂಗಾ ನದಿಯಲ್ಲಿ ಕೊಳೆತ ಹೆಣಗಳೇ ತೇಲಿಹೋಗುತ್ತವಂತೆ; ಅದರಷ್ಟು ಮಲಿನವಾದ ನದಿ ಇನ್ನೊಂದು ಇರಲಾರದಂತೆ. ಇಷ್ಟಿದ್ದರೂ ಅದರ ನೀರು ಪರಿಶುದ್ಧ. ಗಂಗೆಯ ಗುಣಗಳೇ ಈ ಕ್ಷೀರ ನದಿಯಲ್ಲೂ ಇರಬೇಕು.
     ರಂಗಣ್ಣನೆಂದುಕೊಂಡ: ಸಿಗರೇಟು ಪ್ಯಾಕೆಟ್ಟನ್ನು ತನ್ನೊಡನೆ ತರಬೇಕಾಗಿತ್ತು. ಮನೆಯಲ್ಲಂತೂ ಸೇದುವಂತಿಲ್ಲ. ತಂಗಿಯನ್ನು ಹುಡುಕಲೆಂದು ಅವಸರದಲ್ಲಿ ಹೊರಟು ಬಿಟ್ಟೆ...ರಜೆ ಮುಗಿದು ಭಾಗ್ಯನಗರಕ್ಕೆ ಮರಳುವವರೆಗೂ ಸಿಗರೇಟನ್ನು ಮುಚ್ಚುಮರೆಯಿಲ್ಲದೆ ಸೇದುವ ಸ್ವಾತಂತ್ರ್ಯ ತನಗಿಲ್ಲ.
     ಹಿಂದೆ ಒಮ್ಮೆ ತನ್ನ ಟ್ರಂಕಿನಲ್ಲಿ ಸಿಗರೇಟ್ ಪ್ಯಾಕೆಟು ಇದ್ದುದನ್ನು ಕಂಡುಹಿಡಿದು ಸುಭದ್ರೆ ಅಂದಿದ್ದಳು:
     "ಓಹೋ! ಇದು ಬೇರೆ ಶುರು ಮಾಡ್ಬಿಟ್ಟಿದೀಯಾ?"
     ತಾನು ಗದರಿದ್ದ:
     "ಮುಟ್ಬೇಡ! ಅಲ್ಲಿಡು!"
     "ಕೆಟ್ಟ ಚಾಳಿ, ಕೆಟ್ಟ ಚಾಳಿ."
     "ಮೆಡಿಕಲ್ ಸ್ಟೂಡೆಂಟ್ ಗಳು ಸೇದ್ಲೇಬೇಕು.”
     “ರೂಲ್ಸ್ ಐತೇನೋ?”
     "ಔದು ಮತ್ತೆ.” 
     "ನಿನ್ನ ಗೆಣೇರು ಸೇದ್ತಾರೇ. ಅವರೇನೂ ಮೆಡಿಕಲ್ನೋರಲ್ವಲ್ಲ.”
     "ಸಾಕು ತಲೆಹರಟೆ. ಅಪ್ಪನಿಗೆಲ್ಲಾದರೂ ಹೇಳಿದೆಯೊ ಹುಷಾರ್!”
     "ಯೋಳೊಲ್ಲ. ಏನ್ಕೊಡ್ತೀಯಾ ನಂಗೆ? ಇನ್ನೊಂದ್ಸಲ ಬರುವಾಗ ಸ್ನೋ ಬಾಟ್ಲಿ