ಪುಟ:ನೋವು.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೫ ತಂದ್ಕೊಡ್ತೀಯಾ?"

   " ಹೂ೦......ಹೂ೦......"
   –'ನಿನ್ನೆ ಗೆಣೇರು ಸೇದ್ತಾರೆ...'  ಹು೦. ಗೆಳೆಯ ಅಂತ ಮನೆಯೊಳಗೆ ಅವನನ್ನು ಬರಬಿಟ್ಟುದೇ ತಪ್ಪಾಯಿತು. ತನ್ನ ಹಿರಿಯರೂ ಅವನ ಹಿರಿಯರೂ ಸ್ನೇಹಿತರಾದರೇನಾಯಿತು? ಇವನು ಜಿಗಣೆಯ ಹಾಗೆ ಅಂಟಿಕೊಳ್ಳಬೇಕೆ ಈ ಮನೆಗೆ? ಈಗ ಒಂದೇ ದಾರಿ. ಜಿಗಣೆಯನ್ನು ಕಿತ್ತುಹಾಕಿ ಪಾದದ ಕೆಳಗೆ ಹೊಸಕುವ ಹಾಗೆ ಇವನನ್ನು...
    'ನಿನ್ನ ಗೆಣೇರು ಸೇದ್ತಾರೆ.'
    ಈಗ ನೆನಪಾಗುತ್ತಿದೆ. ಒಂದಲ್ಲ ಎರಡು ವರ್ಷಗಳಿಂದೀಚೆಗೆ ಸುಭದ್ರೆ ತನ್ನೊಡನೆ ಕಣ್ಣುಮುಚ್ಚಾಲೆಯಾಡುತ್ತಿದ್ದಾಳೆ. ಅಣ್ಣ-ತಂಗಿ ಯಾವ ವಿಷಯವನ್ನೆತ್ತಿಕೊಂಡು ಮಾತಾಡಿದರೂ ಪದ್ಮನ ಪ್ರಸ್ತಾಪವನ್ನು ಅವಳು ಮಾಡದೆ ಇರುತ್ತಿರಲಿಲ್ಲ.
    ತಾನು ಕೆ. ಎಸ್. ರಂಗೇಗೌಡ, ಕಣಿವೇಹಳ್ಳಿ ಶಾಮೇಗೌಡರ ಮಗ ರಂಗೇಗೌಡ. ಡಾಕ್ಟರಾಗಿ ಇಂಗ್ಲೆಂಡಿಗೆ ಹೋಗಿ ಬಂದು, ರಾಜ್ಯದಲ್ಲೇ ಪ್ರಖ್ಯಾತನಾಗಿ ತನ್ನ ಮನೆತನದ ಕೀರ್ತಿ ಯನ್ನು ಎಲ್ಲೆಡೆಗೆ ಹಬ್ಬಬೇಕು ಎಂಬುದಲ್ಲವೆ ತನ್ನ ಕನಸು ? ಈಗ ಆ ಸ್ವಪ್ನದ ಹಾಲಿನಲ್ಲಿ ನೊಣವಾಗಿ ಬೀಳುವ ಮೊಂಡಾಟವಾಡಬೇಕೆ ಸುಭದ್ರೆ?
   ಇವಳನ್ನು ತಾನು ಸರಿದಾರಿಗೆ ತರಬೇಕು. ಆ ಪದ್ಮನಿಗೆ ಬುದ್ಧಿ ಕಲಿಸಬೇಕು.
   ಸಿಗರೇಟು ಸೇದಲು ತನಗೆ ಕಲಿಸಿಕೊಟ್ಟವನು ಪದ್ಮನಾಭ. ಶರಟನ್ನು ಪ್ಯಾಂಟಿನೊಳಗೆ ಇಳಿಬಿಡಲು ಹೇಳಿಕೊಟ್ಟವನೂ ಅವನೇ. ಆಧುನಿಕ ಜಗತ್ತಿನ ವಿಸ್ಮಯಗಳ— ಹೋಟೆಲು, ರೆಸ್ಟುರಾ, ಸಿನಿಮಾ ಮಂದಿರಗಳ–ಪರಿಚಯವನ್ನು ತನಗೆ ಮಾಡಿಕೊಟ್ಟವನೂ ಆತನೇ. ಆದರೆ ದಿನ ಕಳೆದಂತೆ ಪದ್ಮನ ಸಹವಾಸ ರಂಗಣ್ಣನಿಗೆ ಬೇಸರವನ್ನುಂಟುಮಾಡಿತು. ವಿದ್ಯಾಕ್ಷೇತ್ರದಲ್ಲಿ ಅವರ ದಾರಿಗಳು ಕವಲೊಡೆದ ಮೇಲೆ ಆ ಬೇಸರ ಉತ್ಕಟವಾಯಿತು.
   ...ನಿಂತಲ್ಲಿಂದ ರಂಗಣ್ಣ ಮೇಲಕ್ಕೆ ಗುಡಿಯ ಕಡೆಗೆ ನೋಡಿದ. ಕಲ್ಲು ಮಂಟಪದಲ್ಲಿ ಯಾರೂ ಕಾಣಿಸಲಿಲ್ಲ. ಇಷ್ಟು ದೂರ ಹೇಗೂ ಬಂದೆ; ಅಲ್ಲಿಯತನಕ ಹೋಗಿ ದೇವರ ದರ್ಶನ ತೆಗೆದುಕೊಳ್ಳುವುದಲ್ಲವೆ ಮೇಲು? ಅಲ್ಲದೆ, ಆ ಎತ್ತರದಿಂದ ನಾಲ್ಕೂ ನಿಟ್ಟಿನ ನೋಟ ಸಾಧ್ಯ.
    ರಂಗಣ್ಣ ಮತ್ತೆ ದಿಬ್ಬವನ್ನೇರತೊಡಗಿದ.
    ಮನಸಿನೊಳಗೆ ಮೂಡಿದೊಂದು ಪ್ರಶ್ನೆ ಜಟಿಲವಾಗಿ ಅವನಿಗೆ ಕಂಡಿತು.
    –ಪದ್ಮನ ವಿಷಯದಲ್ಲಿ ತನಗೆ ಬೇಸರವೆನಿಸಿದ ಮೇಲೆ ಸುಭದ್ರೆ-ಪದ್ಮರ ಬಗೆಗೆ ತನ್ನಲ್ಲಿ ಶಂಕೆ ಹುಟ್ಟಿತೆ?  ಅಥವಾ, ಅವರಿಬ್ಬರನ್ನು ಕುರಿತ ಶಂಕೆ ಪದ್ಮನಾಭ ಹಾಗೂ ತನ್ನ ನಡುವೆ ವಿರಸಕ್ಕೆ ಕಾರಣವಾಯಿತೆ?
    ಮೊದಲಿನ ಯೋಚನೆ ತಪ್ಪು. ಎರಡನೆಯದೇ ಸರಿ–ಎಂದು ರಂಗಣ್ಣ ತೀರ್ಮಾನಿಸಿದ.
    ಗುಡಿಗಿನ್ನು ಕೆಲವೇ ಹೆಜ್ಜೆ ಎನ್ನುವಾಗ ರಂಗಣ್ಣ ಆಯಾಸದಿಂದ ಏದುಸಿರು ಬಿಡುವಂತಾಯಿತು. ದೇವರ ಸಾಮಿಾಪ್ಯ ಭಕ್ತರಿಗೆ ಸುಲಭವಾಗಬಾರದೆಂದು ಹಿಂದಿನವರು ಗುಡ್ಡಗಳ ತುದಿಯಲ್ಲಿ ಗುಡಿಗಳನ್ನು ಕಟ್ಟಿದರೇನೊ? ಪದ್ಮನಾಭನಿಗೆ ಇತಿಹಾಸದಲ್ಲಿ ಆಸಕ್ತಿ, ಕಥೆ ಪುಸ್ತಕಗಳಲ್ಲೂ  ಆಸಕ್ತಿ. ಹಳ್ಳಿಯ ಹಿರಿಯರೊಡನೆ ಮಾತನಾಡಿ ಮಾತನಾಡಿ, ತರ್ಕಿಸಿ