ಪುಟ:ನೋವು.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೧೪೧ ಹೇಳಿದ್ರು," ಎ೦ದರು.

     ಅಷ್ಟರಲ್ಲಿ ಅವರಿಬ್ಬರನ್ನೂ ದಾಟಿಕೊಂಡು [ಅವರು ಆಡಿದ ಮಾತುಗಳನ್ನು ಕೇಳಿಸಿಕೊಂಡು] ಭಾಗೀರಥಿ ಪಡಸಾಲೆಗೆ ಹೋದಳು. 
       ದೊಡ್ಡಮ್ಮನೆ೦ದರು :
        "ನೋಡು. ಪೂರ್ವಾಪರ ಯೋಚಿಸಿ ಏನು ಬೇಕೋ ಮಾಡು. ಆದರೂ ಹುಡುಗರ ಕೈಲಿ ಜಾಸ್ತಿ ದುಡ್ಡು ಇಡಬಾರದು. ಪದ್ಮನಿಗೆ, ಲೆಕ್ಕ ಹಾಕಿ ಎಷ್ಟು ಬೇಕೋ ಅಷ್ಟು  ಕೊಟ್ಟರಾಯ್ತು."
       "ಹೂ೦."
       "ಆಗಲೇ ಸಾಮಾನು ಕಟ್ಟೋಕೆ ಹೊರಟಿದ್ದ, ಪದ್ಮ. ಕೋಣೇಲಿ ಇದಾನೇ೦ತ ತೋರುತ್ತೆ."
       "ಹೂ೦"
       ಶ್ರೀನಿವಾಸಯ್ಯ ಹೊರಗೆ ಬಂದು, ಕಿರಿಯ ಮಗನ ಕೊಠಡಿಯ ಬಾಗಿಲಲ್ಲಿ ನಿಂತರು. ಪುಸ್ತಕಗಳನ್ನೂ ಬಟ್ಟೆಗಳನ್ನೂ ಟ್ರ೦ಕಿನಲ್ಲಿ ಒಪ್ಪವಾಗಿ ಜೋಡಿಸತೊಡಗಿದ್ದ, ಪದ್ಮನಾಭ.
   ಮಗನೊಡನೆ ತಾವು ಮಾತನಾಡಿ ಎಷ್ಟೋ ವರ್ಷಗಳಾದಂತಿದೆಯಲ್ಲ – ಎನಿಸಿತು. ಶ್ರೀನಿವಾಸಯ್ಯನವರಿಗೆ, ಅಲ್ಪಾವಧಿಯಲ್ಲಿ ಅನೇಕ ಘಟನೆಗಳು ಜರಗಿ ಹೀಗೆ ಭಾಸವಾಗುತ್ತಿರಬೇಕು-ಎ೦ದುಕೊ೦ಡರು.
   "ಪದ್ಮ," ಎಂದು ಅವರು ಕರೆದರು.
   ಬಾಗಿಲಿಗೆ ಬೆನ್ನು ಮಾಡಿ ಟ್ರ೦ಕಿನೆದುರು ಕುಳಿತಿದ್ದ ಪದ್ಮನಾಭ ತಿರುಗಿ ನೋಡಿದ, ಎದ್ದ.
   ತಂದೆಯ ಎದುರು, ವಿನೀತನಾಗಿ ದೃಷ್ಟಿಯನ್ನು ಬಾಗಿಲಿನ ಚೌಕಟ್ಟಿನ ಮೇಲೆ ನೆಟ್ಟು ಆತ ನಿ೦ತ.
 "ನಗರಕ್ಕೆ ನಾಳೆ ಹೊರಡ್ತೀಯೇನು ?"
  —ಶ್ರೀನಿವಾಸಯ್ಯ ಕೇಳಿದರು.
 " ಹ್ಞು ಅಣ್ಣಯ್ಯ, ನಾಳೆ ಬೆಳಗ್ಗೆ ಹೋಗ್ತೀನಿ."
 “ಬೆಳಗ್ಗೆ ಯಾತಕ್ಕೆ ? ಊಟ ಮಾಡ್ಕೊ೦ಡು ಹೊರಡಬಹುದಲ್ಲ."
 " ಇಲ್ಲ, ಬೆಳಗ್ಗೇನೇ ಹೋದರೆ ವಾಡ‍೯ನ್ ರನ್ನ ನೋಡಿ ಹಾಸ್ಟೆಲ್ ಸೇರ‍್ಕೊಳ್ಳೋದು ಸುಲಭವಾಗುತ್ತೆ."
 "ನಿಜ. ಹಾಗೇ ಮಾಡು."
 "ನಾನು ಹೆಣ್ಣು ನೋಡಿರೋ ವಿಷಯ ನಿನ್ನ ಅಜ್ಜಿ ಆಗ್ಲೇ ಹೇಳಿರ‍್ಬೇಕು.”
 "........."
 “ನೀನೊಮ್ಮೆ ಮೋಹನರಾಯರ ಮನೆಗೆ ಹೋಗ‍್ಬೇಕಾಗುತ್ತೆ."
 "........."
 "ಎಲಾ! ಕಿವುಡನೆ ನೀನು ? ಮೂಕನೆ ? ಕೇಳಿಸ್ಲಿಲ್ವೇನು ನಾನು ಹೇಳಿದ್ದು ?"  
 "ಕೇಳಿಸ್ತು,  ಅಣ್ಣಯ್ಯ."