ಪುಟ:ನೋವು.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ನೋವು

ಹಳ್ಳಿ ಬೇಜಾರಾಗಿರ್ಬೇಕು," ಎಂದ ಗೋವಿಂದ.

" ನೀನು ಶಾಮಣ್ಣನಲ್ಲಿಗೆ ಹೋಗಿ, ಕೆಲಸ ಆಯ್ತೂ೦ತ ತಿಳಿಸಿ ಬಾ."

"ಹೋಗ‍್ತೀನಿ."

...ಮುಚ್ಚ೦ಜೆಯಾಯಿತು. ಗಂಡ ಎಂದು ಬರುವರೋ, ನಗರದಲ್ಲಿ ಆಸ್ತಿ ಮಾಡುವ ವಿಷಯ-ಬ್ಯಾಂಕಿನಲ್ಲಿ ಲೆಕ್ಕ ತೆರೆಯೋದು – ಈ ಹಾಳು ಗೊಂಬೆ – ಇದೆಲ್ಲ ಯಾವಾಗ ತಿಳಿಸುವೆನೋ ಎಂದು ಭಾಗೀರಥಿ ತವಕಗೊಂಡಳು.

...ಪದ್ಮ ಗುಡಿಯನ್ನು ಸಮಿಾಪಿಸಿದಾಗ ಅಲ್ಲಿ ಯಾರೋ ಇದ್ದಂತೆ ಕಂಡಿತು. ಆತ ರಂಗಣ್ಣ ಎಂದು ಪದ್ಮ ಗುರುತು ಹಿಡಿದ. ಅವನೂ ಈತನನ್ನು ಕಂಡಿರಬೇಕು. ಸರಸರನೆ ಇನ್ನೊಂದು ದಿಕ್ಕಿನಿಂದ ಆತ ಇಳಿಯತೊಡಗಿದ.

ಒಮ್ಮೆಲೆ ಪದ್ಮನಿಗೆ ಇಂಥದೇ ಎಂದು ಹೇಳಲಾಗದ ವೇದನೆಯಾಯಿತು. ಬಾಲ್ಯದ ಒಡನಾಡಿಯನ್ನು ತಡೆದು ನಿಲ್ಲಿಸಬೇಕು ಎನಿಸಿತು .

ಅವನನ್ನು ಕರೆಯಲೆಂದು ಪದ್ಮ ಬಾಯಿ ತೆರೆದ.

೧೯

ಪದ್ಮನಾಭ ರಂಗಣ್ಣನನ್ನು ಕರೆಯಲೆಂದು ಬಾಯಿ ತೆರೆದನೇನೋ ನಿಜ. ಆದರೆ ಧ್ವನಿ ಹೊರಡುವುದಕ್ಕೆ ಮುನ್ನವೇ ಆತ ಮನಸ್ಸು ಬದಲಾಯಿಸಿದ.

ತಾನು ಕರೆದಾಗ ಅವನು ಓಗೊಡದೇ ಇದ್ದರೆ ? ಬರದೇ ಇದ್ದರೆ? ಕಡಿದು ಹೋದ ತಂತುವನ್ನು ಮತ್ತೆ ಕೂಡಿಸಿ ಕಟ್ಟುವುದು ವ್ಯರ್ಥ. ತಾನು ಮೇಲೆ ಬಂದೆ; ಅವನು ಕೆಳಗೆ ಹೋದ. ಅದೇ ಸೂಚಿಸುವುದಿಲ್ಲವೆ? ತನ್ನ ಮುಖ ಒಂದು ದಿಕ್ಕಿಗಾದರೆ ಅವನ ಮುಖ ವಿರುದ್ಧ ದಿಕ್ಕಿಗೆ.

ಈ ಎರಡು ಮನೆಗಳಲ್ಲಿ ತಾತಂದಿರ ಕಾಲದಲ್ಲಿ ಆರಂಭವಾದ ಸ್ನೇಹ ಮೊಮ್ಮಕ್ಕಳ ಕಾಲಕ್ಕೆ ಮುಕ್ತಾಯವಾದಂತೆಯೇ.

ಇಳಿದು ಹೋಗುತ್ತಿದ್ದ ರಂಗಣ್ಣನ ಕಡೆಗೆ ಕೊನೆಯ ಬಾರಿಗೆ ನೋಡಿ, ಗುಡಿಯ ಮುಖಮಂಟಪದತ್ತ ಪದ್ಮನಾಭ ಹೆಜ್ಜೆ ಇರಿಸಿದ.

ದೇವರಿಗೆ ನಮಿಸಿ, ಮಂಟಪದಲ್ಲಿ ಕುಳಿತು, ಎದುರು ಹರಡಿದ್ದ ಹಳ್ಳಿಯನ್ನೂ ಅದಕ್ಕೆ ಬೇಲಿಯಾಗಿದ್ದ ಹಾಲು ಹೊಳೆಯನ್ನೂ ಪದ್ಮನಾಭ ದಿಟ್ಟಿಸಿದ. ಆ ಎತ್ತರದಲ್ಲಿ ಅವನ ಪಾಲಿಗೆ ಪ್ರತಿಯೊಂದೂ ಶಾಂತವಾಗಿತ್ತು. ಬೆನ್ನ ಹಿಂದೆ ಕೆಳಗೆ ಗೊಂಡಾರಣ್ಯ: ಎದುರು, ಹಸಿರಾಗಿ ಮಾರ್ಪಡಲು ಬೀಜರಾಶಿಯ ದಾರಿ ನೋಡುತ್ತಿದ್ದ ಬಯಲು; ಅದರಾಚೆಗೆ ದೂರದಲ್ಲಿ ಮತ್ತೆ ಹಸಿರು-ಹಸಿರು, ನೀಲಿನೀಲಿ.

ಎಷ್ಟೋ ಕಾಲದಿಂದ ಕುದಿಯುತ್ತಿದ್ದ ಪದ್ಮನ ಮನಸ್ಸು ಆ ತಣುಪಿನಲ್ಲಿ ತೋಯಿಸಿ ಕೊಂಡು ನೆಮ್ಮದಿ ಪಡೆಯಿತು.