ಪುಟ:ನೋವು.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು

                                        ೧೪೫

'ಇವತ್ತಿನಿಂದ ನನ್ನ ಬದುಕಿನ ಹೊಸ ಅಧ್ಯಾಯ ಆರಂಭ," ಎಂದುಕೊಂಡ ಆತ, ಕುಳಿತಲ್ಲಿಗೆ ದಿಬ್ಬದ ಹೊಂಡ ಕಾಣಿಸುತ್ತಿತು, ಆ ಹೊಂಡದಲ್ಲಿದ್ದುವು ಹಳೆಯ ನೆನಪುಗಳು. ಆದರೆ ಅವು ಪದ್ಮನಾಭನನ್ನು ಈಗ ಕಾಡಲಿಲ್ಲ.

'ಅಪ್ರಿಯವಾದದ್ದನ್ನೆಲ್ಲ ಮರೆತುಬಿಟ್ಟಿದೀನಿ,' ಎಂದ ಪದ್ಮ ತನ್ನಷ್ಟಕ್ಕೆ, ತಾನು ಪ್ರಬಲ ಇಚ್ಚಾಶಕ್ತಿಯ ಮನುಷ್ಯ ಎಂದು ಹೆಮ್ಮೆಪಡುತ್ತ. ಅಲ್ಲಿ ಸ್ವಲ್ಪ ಹೊತ್ತು ಕುಳಿತ ಮೇಲೆ,"ಕತ್ತಲಾಗೋದರೊಳಗೆ ಮನೆಗೆ ಬ೦ದ್ಬಿಡು ಎಂದಳಲ್ಲ ಅಜ್ಜಿ: ಇನ್ನು ಹೋಗೋಣ'ಎಂದುಕೊಂಡು, ಪದ್ಮ ಎದ್ದ...

...ತಮ್ಮ ಪದ್ಮನಾಭ ಗುಡಿಯನ್ನು ತಲಪಿದಾಗ ಗೋವಿಂದ ಶಾಮೇಗೌಡರ ಮನೆಯನ್ನು ಮುಟ್ಟಿದ್ದ. "ಬಾ ಗೋವಿಂದಪ್ಪ. ಬಾ ಅನ್ಬೇಕೋ ? ಬನ್ನಿ ಬನ್ಬೇಕೋ ?" ಎಂದರು ಗೌಡರು, ಗೋವಿಂದನನ್ನು ನೋಡಿದೊಡನೆ, ಅಂಗಳದಲ್ಲಿ ಚಾಪೆಯ ಮೇಲೆ ಎಲೆ ಅಡಿಕೆ ಮೆಲ್ಲುತ್ತ ಅವರು ಆಸೀನರಾಗಿದ್ದರು. ಆ ಚಾಪೆಯ ಮೇಲೆಯೇ ಕೂತುಕೊಳ್ಳುವಂತೆ ಕೈಸನ್ನೆಯಿಂದ ಗೋವಿಂದನಿಗೆ ಅವರು ಸೂಚಿಸಿದರು. ಗೋವಿಂದ, ಗೌಡರಿಗಿಂತ ತುಸು ದೂರದಲ್ಲಿ ಚಾಪೆಯ ಅಂಚಿನಲ್ಲಿ ಕುಳಿತ. ಅವನೆಂದ:

"ನಿಮಗೆ ಹ್ಯಾಗಿಷ್ಟವೊ ಹಾಗೆ ಕರೆದರಾಯ್ತು.

"ನಮ್ಮಿಷ್ಟದ ಹಾಗೇ ಎಲ್ಲಾ ನಡೀತೇತಾ ಗೋವಿಂದಪ್ಪ ?"

" ಯಾಕಿಲ್ಲ ? ಮುನಿಯನ ಪ್ರಕರಣ ನಿಮ್ಮಿಷ್ಟದ ಹಾಗೆಯೇ ಮುಕ್ತಾಯ ಆಗ್ಲಿಲ್ವೆ?" 

" ಏನು ಮಾಡ್ಕಂಬಂದೆ?"

" ಲಾಯರಿ ಮೂಲಕ ರಾಜೀಪತ್ರ ದಾಖಲ್ಮಾಡಿಸ್ದೆ." "ಒಕ್ಕಣೆ ಸರಿಯಾಗೈತೆ ಅಂದ್ರೋ ?"
" ಹೂಂ."

"ಕೋರ್ಟಿಂದ ಲೇಖೀ ಯಾನಾರೂ ತಕ೦ಡ್ಬ೦ದಾ ?"

"ಇಲ್ಲ. ಅದೆಲ್ಲ ಇನ್ಯಾತಕ್ಕೆ, ಸುಮ್ಮನೆ ದುಡ್ಡು ಖರ್ಚು-ಅಂದ್ರು ಲಾಯರು."

ಇದು ಸರಿಯಾಗಲಿಲ್ಲ; ಕೋರ್ಟಿನಿಂದ ಏನಾದರೂ ತಂದಿದ್ದರೆ ಚೆನ್ನಾಗಿತ್ತು; ಅಥವಾ ಗೋವಿಂದ ನಾಟಕ ಆಡ್ತಿದಾನೋ ? ರಾಜೀಪತ್ರವನ್ನು ಆತ ಮುಟ್ಟಿಸಿಯೇ ಇಲ್ಲ ಎಂದಾದರೆ? ಛೆ, ಛೆ, ಹಾಗೆ ಮಾಡಿ ಈ ಹಳ್ಳೀಲಿ ಇವನು ಜೀವನ ನಡೆಸೋದುಕ್ಕು೦ಟೆ?-ಎಂದೆಲ್ಲ ಶಾಮೇ ಗೌಡರು ಯೋಚಿಸಿದರು. 

ಗೌಡರ ಮೌನವನ್ನು ಗೋವಿಂದ ಗಮನಿಸಿ ತಾನೇ ಮುಂದುವರಿದ:

"ಲಾಯರ ಮಾತಿಗೆ ವಿರುದ್ಧ ಹೋಗೋದು ನನಗೆ ಸರಿ ಕಾಣ್ಣಿಲ್ಲ. ಕೆಲಸ ಆಗೋದು ಮುಖ್ಯ. ಅಲ್ಲೆ ದುಡ್ಡಿನ ಪ್ರಸ್ತಾಪ ಬೇರೆ ಅವರು ಮಾಡಿದ್ರು."

" ಏನು ?"

"ಕೇಸು ಗೆದ್ದುಕೊಟ್ಮೇಲೆ ನೂರು ರೂಪಾಯಿ ಕೊಡ್ತೀನಿ ಅಂತ ಮುನಿಯ ಹೇಳಿದ್ದನಂತೆ."

೧೦