ಪುಟ:ನೋವು.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೨೦೮ ನೋವು " ಏನಿಲ್ಲ. ಈ ಮನೆ ಬಿಟ್ಟು ಬರೋಕೆ ಅವಳಿಗೆ ಇಷ್ಟ ಇಲ್ವಂತೆ. ‌ಇಲ್ಲೇ ಇರ್ತಾಳಂತೆ ," ಎಂದು ಮೋಹನರಾಯರು ನಕ್ಕರು. " ಹಹ್ಹ ! ಪದ್ಮ ನಗರಕ್ಕೆ ಹೋದ್ಮೇಲೆ ಇವಳು ಇಲ್ಲಿರ್ತಾಳೆ ಅಂದ್ರೆ ನಂಬೋದು ಸ್ವಲ್ಪ ಕಷ್ಟವೇ.." ಎಂದರು ಶ್ರೀನಿವಾಸಯ್ಯ. "ಬರ್ತೀನಿ  !" ಎಂದು, ನಮಸ್ಕರಿಸಿ, ಮೋಹನರಾಯರು ಹೊರಬಿದ್ದರು. ಕಾಮಾಕ್ಷಿಯ ಕೊಠಡಿಯಿಂದ ಆಕೆಯ ತಾಯಿಯ ಸ್ವರ ಕೇಳಿಸುತ್ತಲೇ ಇತ್ತು. ಮೋಹನರಾಯರನ್ನು ಬೀಳ್ಕೊಡಲು ಶ್ರೀನಿವಾಸಯ್ಯ ಚಪ್ಪರಕ್ಕಿಳಿದ ಮೇಲೆ ವಿಷ್ಟುಮೂರ್ತಿಯೊಬ್ಬರೇ ದಿಕ್ಕು ತೋಚದವರಂತೆ ಬಾಗಿಲಲ್ಲಿ ನಿಂತರು. ಒಳಕೆ ಕಾಮಾಕ್ಷಿ ಜಲಜೆಯನ್ನು ಕರೆದಳು. "ಎಲ್ಲೂ ಸಿಗ್ಲಿಲ್ವೇನೇ ಜಲಜಾ ?" "ಎಲ್ಲಿ ಬಚ್ಚಿಟ್ಟಿದಾಳೊ ಹುಚ್ಚಿ... " "ಥುತ್ ! ಎಂಥ ಮನೆಯಮ್ಮ ಇದು." "ಸಿಕ್ಕೇತು ನೋಡೋಣ." ಕಾಮಾಕ್ಷಿಯ ತಾಯಿ ಗದರಿದರು : " ಸಿಗುತ್ತೆ ಇದು ! ಯಾರು ಕದ್ದಿದ್ದು ಅನ್ನೋದು ಇತ್ಯರ್ಥ ಆಗೋವರೆಗೂ ಈ ಮನೇಲಿ ನಾನು ನೀರು ಮುಟ್ಟೋಲ್ಲ." ಆರತಿಯ ತಮ್ಮ ಒಳಗೆ ಹಣಿಕಿ ನೋಡಿ, "ಕಾಫಿ ತಿಂಡಿ ಸಿದ್ಧವಾಗಿದೆ. ಬರಬೇಕಂತೆ," ಎಂದ. ಕಾಮಾಕ್ಷಿಯ ತಾಯಿಗೆ ರೇಗಿತು. " ಒ ಹೊ ಹೊ ಹೊ ! ಬಂದ ಇವನು ! ನೀನ್ಯಾರಪ್ಪ ಈ ಮನೇಲಿ..." ಆಕೆ ಆಡಿದುದನ್ನು ತನ್ನ ತಾಯಿಗೆ ವರದಿ ಮಾಡಲು ಹುಡುಗ ಹೊರಟು ಹೋದ. ವಿಷ್ಟುಮೂರ್ತಿ ಪತ್ನಿಯಿದ್ದ ಕೊಠಡಿಗೆ ಬಂದರು. " ನೀವೆಲ್ಲ ಹೊರಗ್ಹೋಗಿ ," ಎಂದರು ಮಕ್ಕಳಿಗೆ. ಮಕ್ಕಳು ಹೊರಕ್ಕೆ ನಡೆದೊಡನೆ, ವಿಷ್ಟುಮೂರ್ತಿ ಬಾಗಿಲು ಮುಚ್ಚಿ ಒಳಗಿನಿಂದ ಅಗಣಿ ಹಾಕಿದರು. ಪಡಸಾಲೆಯಲ್ಲಿದ್ದ ಕಿರಿಯರಿಗೆ ಕೆಲವು ಮಾತುಗಳಷ್ಟೇ ಕೇಳಿಸಿದುವು. ಹೆತ್ತವಳೆದುರು ತಂದೆ ಮಂಡಿಯೂರಿ ಕೈ ಜೋಡಿಸಿದುದನ್ನು ಅವರು ಕಾಣರು. ಧಪ್ ಧಪ್ ಸದ್ದಾಯಿತು. ತಾಯಿಯ ಮುಷ್ಟಿ ತಂದೆಯ ಮೈ ಮುಟ್ಟುತ್ತಿದೆ-ಎಂದು ಕಾಮಾಕ್ಷೆ ಊಹಿಸಿಕೊಂಡಳು. ಪಿಸುದನಿಯಲ್ಲಿ ವಿಷ್ಟುಮೂರ್ತಿಯವರ ಪ್ರಾರ್ಥನೆ. ಅಂಗಳಕ್ಕೂ ಕೇಳಿಸುವಂತೆ ಅವರ ಪತ್ನಿಯ ಉತ್ತರ. " ನನ್ನ ಮಾನ ಕಳೀಬೇಡ, ಸಾತೂ.." " ಇದ್ದರೆ ತಾನೆ ಮಾನ ?" “ ಸಾತೂ...!"