ವಿಷಯಕ್ಕೆ ಹೋಗು

ಪುಟ:ನೋವು.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೨
ನೋವು

ಎಂದು ಭಾಗೀರಥಿ——ಅವರ ಮೊಮ್ಮಗನ ಮಡದಿ——ಅವರಿಗೆ ತಿಳಿಸಿದ್ದಳು. ಯಾಕೆ ಬ೦ದಿದ್ಧಾನೊ? ಶಾಮಣ್ಣನ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವೊ ಏನೊ——ಎಂದು ಕೊಳ್ಳುತ್ತ ಅವರು ಅಡುಗೆಮನೆಯಿಂದ ಹೊರಬಂದರು.

ಎತ್ತರದ ನಿಲುವು, ಗೋದಿಗೆಂಪು ಮೈ........

" ಏನ್ಮಗೂ, ಚೆನ್ನಾಗಿದೀಯಾ ? "

ಲಯಬದ್ದವಾದ ಮಾತು. ಇಂಪಾದ ಸ್ವರ.

ರಂಗಣ್ಣ ಉತ್ತರವೀಯುವುದಕ್ಕೆ ಮುಂಚೆಯೇ ಅವರು ಮತ್ತೂ ಅಂದರು:

" ಒಂದು ವಾರವಾಯ್ತಲ್ಲೋ ಭಾಗ್ಯನಗರದಿ೦ದ ಬಂದು ? ದೊಡ್ಡಮ್ಮನ್ನ ನೋಡೋಕೆ ಈ ಮೊದಲೇ ಬರಬಾರದಾಗಿತ್ತೇನೋ ? "

ಆ ಧ್ವನಿ ತನ್ನ ಮೈದಡವಿ ಮುತ್ತಿಟ್ಟಂತಾಯಿತು ರಂಗಣ್ಣನಿಗೆ. ಅದು, ತಾನು ಈ ಜಗತ್ತಿಗೆ ಬರಲು ನೆರವಾದ ವ್ಯಕ್ತಿ. ಸುಭದ್ರೆಯ ಮುಖವನ್ನು ಮೊದಲು ಕಂಡವರೂ ಆಕೆಯೇ. ತನ್ನ ತಾಯಿಯನ್ನು ಉಳಿಸುವುದು ಅವರಿಂದ ಆಗಿರಲಿಲ್ಲ ನಿಜ. ಆದರೂ ಅವರು ತನಗೆ ಆತ್ಮೀಯರು.

" ಬರಬೇಕಾಗಿತ್ತು ದೊಡ್ಡಮ್ಮ. ಆದರೆ ಏನೋ ಕೆಲಸ......"

"ಹೂನಪ್ಫಾ, ನಾಳೆ ಡಾಕ್ಟರಾಗುವವನು."

(ಹಳ್ಳಿಯವರಿಗೆಲ್ಲ " ದೊಡ್ಡಮ್ಮ" ಆ ವೃದ್ದೆ).

ಈ ಪರಿಸ್ಥಿತಿಯಲ್ಲಿ ಇಂಥ ಮಾತುಕತೆ ಆಭಾಸಕರ ಎನ್ನುವಂತೆ ಶ್ರಿನಿವಾಸಯ್ಯ ಗಾಳಿ ಯಲ್ಲಿ ಕೈಯಾಡಿಸಿದರು.

ಅವರೆಂದರು :

"ಅಮ್ಮ! ಮುನಿಯನನ್ನು ದಿಬ್ಬದ ಹೊಂಡದಲ್ಲಿ ಯಾರೋ ಕೊಂದಾಕಿದಾರ೦ತೆ. ರಂಗಣ್ಣ ಹೇಳಿದ್ದಾನೆ. ಹೆಣಾನ ನೋಡಿ ಬಂದ್ನಂತೆ. ಶಾಮಣ್ಣ ಊರಲ್ಲಿಲ್ಲ. ಈಗ ಏನಾಡೋಣ? ”

ದೊಡ್ಡಮ್ಮ ಎವೆ ಮುಚ್ಚದೆ ನಿಂತು ಮಗನ ಮಾತುಗಳನ್ನು ಆಲಿಸಿದರು. ಒಂದು ಕ್ಷಣ ಸುಮ್ಮನಿದ್ದರು. ಏನನ್ನೋ ಹೇಳುತ್ತಲಿದ್ದವರಂತೆ ತುಟಿಗಳು ಮೌನವಾಗಿ ಚಲಿಸಿದುವು.

ಕಟ್ಟಿಕೊಂಡಿದ್ದ ಗಂಟಲನ್ನು ಸರಿಪಡಿಸಿ ಅವರೆಂದರು:

" ಪಾಪಿ ಮುಂಡೇಗಂಡ. ಏನೋ ಮಾಡೋಕೆ ಹೋಗಿ ಪ್ರಾಣಾನೇ ಕಳಕೊಂಡ್ರಲ್ಲಾ...."

ಧ್ವನಿ ಅಲೆಅಲೆಯಾಗಿ ಗಾಳಿಯೊಡನೆ ಲೀನವಾಯಿತು.

ಮತ್ತೊಂದು ಕ್ಷಣ ಮಾತಿಲ್ಲದೆ ನಿಂತ ಬಳಿಕ ದೊಡ್ಡಮ್ಮ ಅಂದರು:

" ಏಳು ಶೀನ,ಕೃಷ್ಟೇಗೌಡನನ್ನ ಕರೆಸು. ಮುನಿಯನ ಹೆಂಡತಿಗೂ ಮಗನಿಗೂ ವಿಷಯ ಗೊತ್ತಿದೆಯೋ ಇಲ್ಲವೋ. ಮಾದನಿಗೆ ಹೇಳಿಕಳಿಸು. ತಮ್ಮ ಜನವನ್ನ ಕರ್ಕೊಂಡ್ಬರ್ತಾನೆ. ಕತ್ತಲಾಗೋದರೊಳಗೆ ಶವವನ್ನ ಹಳ್ಳಿಗೆ ತಂದ್ಬಿಡ್ಲಿ. ಶಾಮಣ್ಣ ಇವತು ಬರ್ತಾನೆ, ಅಲ್ವೆ?"

ರಂಗಣ್ಣನೆಂದ: