ಗೌಡರ ಮಗಳು ಸುಬ್ಬಿಯೂ ಪರಸ್ಪರ ಸಲಿಗೆಯಿಂದಿದ್ದಾರೆ ಎಂದು ಗೋವಿಂದ ಬಲ್ಲ. ಅದಿರಬಹುದೆ? ಮುನಿಯನ ಪ್ರಕರಣಕ್ಕೆ ಸಂಬಂಧಿಸಿ ತಂದೆಯೊಡನೆ ಮಾತನಾಡಲು ಶಾಮೇ ಗೌಡರು ಬಂದಿದ್ದಾರೆ ಎಂದುಕೊಂಡಿದ್ದ ಗೋವಿಂದ, ಮೊದಲು, ಅದಲ್ಲವೆಂಬುದು ಪದ್ಮನನ್ನು ತಂದೆ ಕೂಗಿ ಕರೆದಾಗ ಸ್ಪಷ್ಟವಾಗಿತ್ತು.
ಮನೆಯಿಂದ ಹೊರಟ ಗೋವಿಂದ ಕೃಷ್ಣೇಗೌಡನ ಮನೆಯಲ್ಲಿ ಕೆಲ ನಿಮಿಷಗಳಿದ್ದ. ಅನಂತರ, ಮುನಿಯ ಸತ್ತ ವಿಷಯವಾಗಿ ಜನ ಏನು ಹೇಳುತ್ತಾರೆ ಎಂದು ತಿಳಿಯಲು ದಾರಿಯಲ್ಲಿ ಒಬ್ಬಿಬ್ಬರೊಡನೆ ಮಾತನಾಡುತ್ತ ನಿಂತ, ಅಬ್ದುಲ್ಲ ನಿಜವಾಗಿಯೂ ಊರಲ್ಲಿಲ್ಲವೆಂಬುದನ್ನು ಖಚಿತ ಮಾಡಿಕೊಂಡ. ಮುಂದೆ ಅಲ್ಲಿಂದ ಮೋಟಾರು ರಸ್ತೆಯ ಕಡೆಗೆ ನಡೆದ.
ಈಗ ರಂಗಣ್ಣನನ್ನು ಕಂಡು ಗೋವಿಂದನಿಗೆ ಸಂತೋಷವಾಯಿತು. ಇವನೊಡನೆ ಮಾತಾಡಿ ತನ್ನನ್ನು ಕಾಡಿದ್ದ ಒಂದೆರಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಆತ ಭಾವಿಸಿದ.
ರಸ್ತೆಯ ಅಂಚನ್ನು ಏರುತ್ತಿದ್ದಂತೆ ರಂಗಣ್ಣನ ಕಡೆ ನೋಡಿ ಗೋವಿಂದ ತೋಳು ಬೀಸಿದ. ಪ್ರತಿವಂದನೆಯಾಗಿ ಯಾವ ಸನ್ನೆಯನ್ನೂ ಮಾಡಲಿಲ್ಲವಾದರೂ ಬಸ್ಸು ಬರುವ ತನಕ ಗೋವಿಂದನ ಸಾಮಿಾಪ್ಯದಲ್ಲಿ ಹೊತ್ತು ಕಳೆಯಲು ರಂಗಣ್ಣ ಸಿದ್ಧನಾದ.
ಹತ್ತಿರ ಬಂದು ಗೋವಿಂದನೆಂದ:
"ಇದೇನು ರಂಗಣ್ಣ ಇವತ್ತು ನಗರಕ್ಕೆ ?"
ನಾನು ನಗರಕ್ಕೆ ಹೋಗ್ತಿದೀನಿ ಅಂತ ಯಾರು ಹೇಳಿದ್ದು ?" ಎಂದು ರಂಗಣ್ಣ ಮರು ಪ್ರಶ್ನೆ ಹಾಕಿದ. - -
" ಇನ್ಯಾರು? ಕರಿಯ,ಅಷ್ಟು ಗೊತಾಗೊಲ್ವ?ಹಳ್ಳಿಗೆ ವಾಪಸ್ಸು ಬರ್ತಿದ್ದ, ಸಿಕ್ದ
"ನಿಜ, ನನ್ನನ್ನ ಬಿಡೋಕೆ ಬಂದಿದ್ದ."
" ನಿನಗೇನಪ್ಪ, ಆಳುಗಳು ಬರ್ತಾರೆ. ನನ್ನಂಥವರು ಒಂಟಿಯಾಗಿ ನಡೀಬೇಕು. ಹು.. ನಾನು ಕೇಳಿದ್ದಕ್ಕೆ ಉತ್ತರ ಸಿಗ್ಲಿಲ್ಲಲ್ಲ ?"
ಏನು ?'
" ಇವತ್ತೇನು ಈ ಪ್ರಯಾಣ ಅಂತ, ರಜಾ ಇನ್ನೂ ಇದೆ, ಅಲ್ವ ?"
ಅರ್ಜೆಂಟ್ ಕೆಲಸ.ಡೀನ್ ಬರಹೇಳಿದ್ದಾರೆ.
"ಹಾಗೋ? ಡೀನ್ ಅಂದರೆ ಪ್ರಿನ್ಸಿಪಾಲ್ ಇದ್ದ ಹಾಗೆ ಅನ್ನು.”
ಹೆಚ್ಚು ಕಮ್ಮಿ ಹಾಗೇ." -
" ಬಸ್ಸು ನಿಲ್ಲಿಸ್ಲಿಲ್ವಂತೆ."
" ಇಲ್ಲ, ಸೀಟಿರಲಿಲ್ಲ."
" ಸೀಟಿಲ್ವಿದ್ರೆ ಏನಾಯ್ತು? ನಾನಾಗಿದ್ದಿದ್ರೆ ನಿಲ್ಲಿಸ್ಬಿಡ್ತಿದ್ದೆ."
ಹ್ಯಾಗೊ ?”
" ನನ್ನ ಟೋಪಿ-ಡ್ರೆಸ್ಸು ನೋಡಿದ್ರೆ ಯಾವ ಡ್ರೈವರಾದರೂ ನಿಲ್ಲಿಸ್ತಾನೆ."
ಮೊದಲಿನಿಂದಲೂ ಗೋವಿಂದ ರಂಗಣ್ಣನನ್ನು ಸಂಬೋಧಿಸುತ್ತಿದ್ದುದು ಏಕವಚನದಲ್ಲೇ. ಈಗ ರಂಗಣ್ಣನಿಗೆ ಅದು ಒಪ್ಪಿಗೆ ಇಲ್ಲ, ಹಾಗೆಂದು ಬಾಯಿ ಬಿಟ್ಟು ಹೇಳುವುದು ಹೇಗೆ?