ಪುಟ:ನೋವು.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ನೋವು

೬೯

ಗೋವಿಂದ ಪಡಸಾಲೆಯಲ್ಲಿರಲಿಲ್ಲ. [ವಿಷ್ಣುಮೂರ್ತಿ ಮತ್ತು ತಂದೆ ಆಡುತ್ತಿದ್ದ
ಮಾತನ್ನು ತಾನು ಬಂದೊಡನೆ ನಿಲ್ಲಿಸಿದರೆಂದು ಗೋವಿಂದ ನೇರವಾಗಿ ತನ್ನ ಕೋಣೆಗೆ ಸಾಗಿದ್ದ.
ಅಲ್ಲಿ ಯಾವುದೋ ಆಂಗ್ಲ ಕಾದಂಬರಿಯನ್ನು ನೋಡುವುದರಲ್ಲಿ ಮಗ್ನನಾಗಿದ್ದ ಪದ್ಮನಾಭ.]
ಭಾಗೀರಥಿ ಮಗುವಿನ ಬಟ್ಟೆ ಆಯ್ದುಕೊಳ್ಳುತ್ತಿದ್ದಾಗ ಸ್ವಾರಸ್ಯಕರ ಮಾತುಕತೆ
ಕೇಳಿಸಿತು. ತಕ್ಷಣವೆ ಅಲ್ಲಿಂದ ಹೊರಡಲಾಗದೆ, ಬಾಗಿಲು ಮರೆ ಮಾಡಿ, ಆಕೆ ಕೊಠಡಿಯಲ್ಲೇ
ನಿ೦ತಳು.
ಶ್ರಿನಿವಾಸಯ್ಯ ಮತ್ತು ವಿಷ್ಣುಮೂರ್ತಿ:
"ಗೋವಿಂದನೆ ಜತೆ ನೀವೇನಾದರೂ ಈ ವಿಷಯ ಮಾತಾಡಿದೀರಾ ವಿಷ್ಣುಮೂರ್ತಿ
ಗಳೆ ?"
"ಛೆ ! ಛೆ ! ಹಾಗೆ ಮಾಡೇನಾ ?"
"ಅವನಿಗೇನೋ ನಿಮ್ಮನ್ನು ಕಂಡರೆ ಇಷ್ಟ, ಜಾತಕ ಸರಿ ಹೋದರೆ—”
"ಅದಕ್ಕೇನು? ಮದುವೆಗೆ ನಿಂತಿರುವ ಇಬ್ಬರು ಹುಡುಗಿಯರ ಜಾತಕಗಳನ್ನೂ
ತಂದ್ಕೊಡ್ತೀನಿ. ಅಥವಾ ತಾವೇ ತಮ್ಮ ಚಿರಂಜೀವರ ಜಾತಕಗಳನ್ನ ಕೊಟ್ಟರೆ...."
"ಪದ್ಮನಾಭನ ವಿಷಯ ನಾನೇನೂ ಹೇಳಲಾರೆ. ಗೋವಿಂದನದೂ ಅಷ್ಟೆ......
ಹೇಗೂ ಇರ್ತಿರಲ್ಲ...... ಅಮ್ಮನನ್ನು ಒಂದು ಮಾತು ಕೇಳಿ ಹೇಳ್ತೀನಿ.”
"ಅವಶ್ಯವಾಗಿ, ಅವಶ್ಯವಾಗಿ. ಕೇಳಬೇಕಾದ್ದೇ."
"ನಿನ್ನೆ ನಗರ ಬಿಟ್ಟಾಗಲೇ ಇದೆಲ್ಲಾ ಯೋಚಿಸ್ಕೊಂಡಿದ್ರೊ?"
"ಇಲ್ಲಪ್ಪ! ಹೆಣ್ಣು ಹೆತ್ತವರು ಅಳಿಯಂದಿರನ್ನ ಹುಡುಕೋದು ಸ್ವಾಭಾವಿಕ ಅನ್ನಿ.
ಗೋವಿಂದರಾಯರ ವಿಷಯದಲ್ಲಿ ಕುತೂಹಲವೇನೋ ಇತ್ತು. ಆದರೆ ಇದು ಆತುರಪಡೋ
ಸಂಗತಿ ಅಲ್ವಲ್ಲ" ಎಂದರು ಕೃಷ್ಣಮೂರ್ತಿ, ಉಗುಳು ನುಂಗಿ,
"ಅದ್ಸರಿ ಅನ್ನಿ... ಹೋಟೆಲಿಡೋ ಅದ್ಯಾವುದೋ ಖಾಲಿಮನೆ ಇದೆ ಅಂತ ಗೌಡರು
ಅಂದ್ರಂತಲ್ಲ. ನೋಡ್ಕೊಂಡು ಬರ್ತಿರೇನು? ಗೋವಿಂದಾ, ಗೋವಿಂದೂ..."
ಹೊರ ಕೊಠಡಿಯಿಂದ ಗೋವಿಂದನ ಉತ್ತರ ಬಂತು : "ಬಂದೆ ಅಣ್ಣಯ್ಯಾ..."
ಭಾಗೀರಥಿ ಮಗುವನ್ನೆತ್ತಿಕೊಂಡು ಸ್ನಾನದ ಮನೆಗೆ ಹೋದಳು.
ತಾನು ಕೇಳಿದ ಸಂಭಾಷಣೆಗಳನ್ನು ಮೆಲುಕು ಹಾಕುತ್ತ, ಒಮ್ಮೆ ಮುಖ ಗಂಟಿಕ್ಕಿ
ಕೊಳ್ಳುತ್ತ, ಒಮ್ಮೆ ನಗುತ್ತ ಭಾಗೀರಥಿ ಮಗುವಿಗೆ ಸ್ನಾನ ಮಾಡಿಸಿದಳು. ತಾಯಿಯ
ಮನಸ್ಸು ಎಲ್ಲಿಯೋ ಅಲೆಯುತ್ತಿತ್ತೆಂದು ಮಗು ನಿತ್ಯಕ್ಕಿಂತ ತುಸು ಹೆಚ್ಚಾಗಿ ಅತ್ತಿತು.
ಮರಿಮಗ ಗಟ್ಟಿಯಾಗಿ ಅಳುತ್ತಿರುವನಲ್ಲ, ಯಾಕೆ? ಎಂದು ನೋಡಲು ದೊಡ್ಡಮ್ಮ
ಅತ್ತ ಬಂದರು. ಬಚ್ಚಲು ಮನೆಯ ಬಾಗಿಲಲ್ಲಿ ನಿಂತು ಅವರು ರಾಗವೆಳೆದರು.
"ಯಾಕೋ ಶ್ರಿಪಾದೂ ? ನೀರು ಬಿಸಿಯೇನೋ?"
ಯೋಚನೆಗಳ ಗುಂಗು ಕಳೆದ ಭಾಗೀರಥಿ, “ಇಲ್ಲ ದೊಡ್ಡಮ್ಮ, ನೀರು ಹದವಾಗಿದೆ,”
ಎಂದಳು.
ಹಿರಿಯರ ಧ್ವನಿಗಳನ್ನು ಕೇಳಿ ಒಂದು ಕ್ಷಣ ಮಗು ಸುಮ್ಮನಾಯಿತು.