ಪುಟ:ನೋವು.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮

ನೋವು

"ನಿನ್ನ ನಾರು ಬೇರಿನೆ ಕಷಾಯ ಅವರಿನ್ನು ಮುಟ್ಟೋದಿಲ್ಲ."
"........."
"ಏನು ಕಾಹಿಲೆಯಾದರೂ ಡಾಕ್ಟರ್ ರಂಗೇಗೌಡರು ಇಂಗ್ಲಿಷ್ ಔಷಧಿ ಕೊಡ್ತಾರೆ.”
" ಹಾಗೆಲ್ಲ ಗೇಲಿ ಮಾಡ್ಬಾರ್ದು, ಗೋವಿಂದೂ. ಡಾಕ್ಟ್ರ ಪರೀಕ್ಷೆಗೆ ಓದ್ತಿರೋನು.
ಔಷಧಿ ಕೊಟ್ರೆ ಏನ್ತಪ್ಪು ?"
"ನಾನೆಲ್ಲಿ ಗೇಲಿ ಮಾಡ್ದೆ ದೊಡ್ಡಮ್ಮ ? ಇರೋ ಸಂಗತಿ ಹೇಳ್ದೆ."
"ಸುಬ್ಬಿಗೆ ಈಗ ಹ್ಯಾಗಿದೆಯಂತೆ ?”
"ನಾವು ಕೂತಿದ್ದಾಗಲೇ ರಂಗಣ್ಣನ್ನ ಕರೆದು ಶಾಮೇಗೌಡ್ರು ಕೇಳಿದ್ರು: ಸುಬ್ಬಿಗೆ
ಜರ ಬಿಟ್ಟೈತಾ ? ಡಿಕ್ರಿ ಇಟ್ಟು ನೋಡ್ದಾ ?–ಅಂತ. ಡಿಕ್ರಿ ಅಂದ್ರೆ ಮಿಾಟರು, ಈಗ
ಕಮ್ಮಿ–ಅಂದ ರಂಗಣ್ಣ."
"ಗುಣವಾಗಲಪ್ಪ ಸದ್ಯಃ..."
"ನಿನ್ನೆ ರಂಗಣ್ಣ ನಗರಕ್ಕೆ ಹೋಗಿ ಔಷಧಿ ತಂದ. ಹೋಗೋಕೆ ಬಸ್ ಸಿಗ್ದೆ ರಸ್ತೇಲಿ
ಒದ್ದಾಡ್ತಾ ಇದ್ದ; ನಾನೇ ಒಂದು ಲಾರಿ ನಿಲ್ಸಿ ಸೀಟು ಮಾಡಿಸ್ಕೊಟ್ಟು ಕಳಿಸ್ದೆ. ತಂಗಿ
ಜ್ವರ ಅಂತ ಒಂದು ಮಾತು ಅಂದ್ನೆ ? ಕಾಲೇಜಿಂದು ಅರ್ಜೆಂಟ್ ಕೆಲ್ಸ, ಅಂತ ಸುಳ್ಳು ಹೇಳ್ದ."
"ಇರಲಿ ಬಿಡು, ಗೋವಿಂದ. ಏನೋ ಪಾಪ, ಬೇಸರವಾಗಿರ್ಬೇಕು, ಹೇಳ್ಲಿಲ್ಲ.
ಇನ್ನೊಬ್ಬರ ವಿಷಯ ನಾವು ಒಳ್ಳೇದು ಯೋಚಿಸ್ಬೇಕೇ ಹೊರ್ತು ಯಾವತ್ತೂ ಕೆಟ್ಟದು
ಯೋಚಿಸಬಾರ್ದು."
"ಇಲ್ಲ ದೊಡ್ಡಮ್ಮ, ಇಲ್ಲ. ನಾನ್ಯಾಕೆ ಕೆಟ್ಟದು ಯೋಚಿಸ್ಲಿ ?... ಅಂದ ಹಾಗೆ
ದೊಡ್ಡಮ್ಮ, ನಿನ್ನೆ ಗೌಡರು ಇಲ್ಲಿಗೆ ಬಂದಿದ್ದರಲ್ಲ–ಆಮೇಲೆ ಅಣ್ಣಯ್ಯನೂ ನೀನೂ
ಮಾತಾಡ್ತಾ ಇದ್ರಿ, ಏನು ಸಮಾಚಾರ ?"
"ಏನೋ ಸಣ್ಣ ವಿಷಯ. ಕಡ್ದೀನ ಗುಡ್ಡ ಮಾಡಬಾರದಪ್ಪ. ಮಾತಾಯ್ತು, ಮರೆತ್ಬಿ
ಡ್ಬೇಕು." "ನಿನಗೆ ಹೇಳೋಕೆ ಇಷ್ಟ ಇಲ್ಲ, ಬಿಡು.ಹ್ಯಾಗಾದರೂ ಗೊತ್ತಾಗಿಯೇ ಆಗುತ್ತೆ ನಂಗೆ."
"ಇಂಥಾ ವಿಷಯದಲ್ಲೆಲ್ಲ ನೀನು ಕೈ ಹಾಕಬಾರದು , ಗೋವಿಂದ.” "ಓಯೆಸ್, ದೊಡ್ಡಮ್ಮ."
"ನಗರದೋರು ಊಟ ಮಾಡ್ಕೊಂಡು ಹೋಗ್ತಾರೆ ತಾನೆ?"
"ಹಾಗೇಂತ ಅಣ್ಣಯ್ಯ ಅವರಿಗೆ ಹೇಳ್ತಾ, ಇದ್ರು."
"ಸರಿ, ಮತ್ತೆ, ಅವರ ಸ್ನಾನಗೀನಕ್ಕೆಲ್ಲ ಏರ್ಪಾಟು ಮಾಡು. ಬೇಕಿದ್ದರೆ ಸ್ವಲ್ಪ ಹೊತ್ತು
ತಿರುಗಾಡ್ಕೊಂಡು ಬನ್ನಿ"
"ಏನಿದೆ ಇಲ್ಲಿ ತಿರುಗಾಡ್ಕೊಂಡು ಬರೋದಕ್ಕೆ? ನೀನೂ ಸರಿ!"
"ಯಾಕೆ ? ಏನಿಲ್ಲ ನಮ್ಮೂರಲ್ಲಿ ? ನದಿಗೆ ಹೋಗ್ಬನ್ನಿ, ಗುಡಿಗೆ ಹೋಗ್ಬನ್ನಿ."
"ಬರ್ತಾರೋ ಕೇಳ್ನೋಡ್ತೀನಿ"
ಗೋವಿಂದ ಪಡಸಾಲೆಗೆ ನಡೆದಿದ್ದ.ಸ್ನಾನ ಮಾಡಿಸಲು ಮಗುವನ್ನು ಕರೆದೊಯ್ಯಲೆಂದು
ಭಾಗೀರಥಿ ತನ್ನೆ [ಗೋಪಾಲ ಹಾಗೂ ತನ್ನ] ಕೊಠಡಿಗೆ ಬಂದಳು.